ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ‘ಅತಿಥಿ ಶಿಕ್ಷಕರ ಬೇಡಿಕೆ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿ’

Published 25 ನವೆಂಬರ್ 2023, 14:34 IST
Last Updated 25 ನವೆಂಬರ್ 2023, 14:34 IST
ಅಕ್ಷರ ಗಾತ್ರ

ಸಿಂಧನೂರು: ‘ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳ ಹಾಗೂ ಬೇಡಿಕೆಗಳ ಈಡೇರಿಕೆ ಕುರಿತಂತೆ ಶಾಸಕ ಹಂಪನಗೌಡ ಬಾದರ್ಲಿ ಅವರು ಧ್ವನಿಯೆತ್ತಿ ಸರ್ಕಾರದ ಗಮನ ಸೆಳೆಯಬೇಕು’ ಎಂದು ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ತಾಲ್ಲೂಕು ಘಟಕ ಶನಿವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿತು.

‘ಪ್ರತಿವರ್ಷವೂ ಹೊಸದಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪದ್ದತಿ ಕೈಬಿಡಬೇಕು. ಅತಿಥಿ ಶಿಕ್ಷಕರನ್ನು ಹೊಸ ನೇಮಕಾತಿ ಕಾರಣ ನೀಡಿ ಬಿಡುಗಡೆಗೊಳಿಸದೆ ಮುಂದಿನ ಶೈಕ್ಷಣಿಕ ಸಾಲಿನವರೆಗೆ ಮುಂದುವರಿಸಬೇಕು. ಆಯಾ ಶಾಲೆಗಳಲ್ಲಿ ಸೇವಾ ಅನುಭವದ ದೃಢೀಕರಣ ಪತ್ರ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು. ಸರ್ಕಾರಿ ಕಾಯಂ ಶಿಕ್ಷಕರಿಗೆ ನೀಡಲಾಗುತ್ತಿರುವಂತೆ ಅತಿಥಿ ಶಿಕ್ಷಕರಿಗೂ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿಯೂ ವರ್ಷದ 12 ತಿಂಗಳು ವೇತನ ನೀಡಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಜಮೆ ಮಾಡಬೇಕು’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಯ್ಯಪ್ಪ ಎಸ್.ನಾಯಕ ತುರ್ವಿಹಾಳ ಒತ್ತಾಯಿಸಿದರು.

‘ಅತಿಥಿ ಶಿಕ್ಷಕರಿಗೆ ಮಾಸಿಕ ಕನಿಷ್ಠ ₹20 ಸಾವಿರ ವೇತನ ಹೆಚ್ಚಿಸಬೇಕು. ಅತಿಥಿ ಶಿಕ್ಷಕರನ್ನು ಕಾಯಂ ಮಾಡಬೇಕು. ನೇಮಕಾತಿಯಲ್ಲಿ ಶೇ.5 ಕೃಪಾಂಕ ಮೀಸಲಾತಿ ನಿಯಮ ಜಾರಿಗೊಳಿಸಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ಕೈಬಿಟ್ಟು ಗೌರವ ಶಿಕ್ಷಕ ಎಂದು ನಮೂದಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಶಾಸಕರು ಸರ್ಕಾರದ ಗಮನ ಸೆಳೆಯಬೇಕು’ ಎಂದು ಮನವಿ ಮಾಡಿದರು.

ಗೌರವಾಧ್ಯಕ್ಷ ಚಂದ್ರುಗೌಡ ಮಾಲಿಪಾಟೀಲ, ಉಪಾಧ್ಯಕ್ಷರಾದ ಯನಮೂರ ನಾಯಕ ಕುರಕುಂದಾ, ದುರುಗಮ್ಮ ಬಸಾಪು ಇಜೆ, ಸಂಘಟನಾ ಕಾರ್ಯದರ್ಶಿಗಳಾದ ತಿಮ್ಮಾರೆಡ್ಡಿ ಬ್ಯಾಲಿಹಾಳ, ಬಾಳಪ್ಪ ಗಡಾದ್, ಸಂಚಾಲಕರಾದ ಅಮರಮ್ಮ ತಿಡಿಗೋಳ, ಶರಣಬಸವ ಕೆ.ಹೊಸಳ್ಳಿ, ವಿನಾಯಕ ವಂದ್ಲಿ, ಖಜಾಂಚಿಗಳಾದ ಸೋಮಪ್ಪ ಉದ್ಬಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT