ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಭಾವದಿಂದ ನೆರವೇರಿದ ರಾಯರ ವರ್ಧಂತಿ

ಶ್ರೀ ರಾಘವೇಂದ್ರ ಸ್ವಾಮಿ ಗುರುವೈಭವೋತ್ಸವ ಸಮಾರೋಪ
Last Updated 2 ಮಾರ್ಚ್ 2020, 15:28 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಯರ 425ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮಗಳು ಭಕ್ತಿಭಾವದಿಂದ ಸೋಮವಾರ ನೆರವೇರಿದವು.

ಗುರುರಾಜರ ಪಟ್ಟಾಭಿಷೇಕ ಆಚರಣೆ ಮೂಲಕ ಒಂದು ವಾರ ನಡೆದಿದ್ದ ಶ್ರೀ ರಾಘವೇಂದ್ರ ಸ್ವಾಮಿ ಗುರುವೈಭವೋತ್ಸವವು ವರ್ಧಂತಿ ಕಾರ್ಯಕ್ರಮಗಳ ಮೂಲಕ ಸಮಾರೋಪಗೊಂಡಿತು.

ರಾಯರ ಜನ್ಮದಿನದ ನಿಮಿತ್ತ ತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಟಿಟಿಡಿ ಆಡಳಿತಾಧಿಕಾರಿಗಳು ತೆಗೆದುಕೊಂಡು ಬಂದಿದ್ದರು. ಶೇಷವಸ್ತ್ರವನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ಸ್ವಾಗತಿಸಲಾಯಿತು. ಆನಂತರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶೇಷವಸ್ತ್ರಗಳನ್ನು ತಲೆಮೇಲಿಟ್ಟುಕೊಂಡು ಶ್ರೀಮಠದ ಪ್ರಾಕಾರದಲ್ಲಿ ವಿವಿಧ ವಾದ್ಯಮೇಳ ಹಾಗೂ ವೇದಘೋಷಗಳೊಂದಿಗೆ ಪ್ರದಕ್ಷಣೆ ಮಾಡಿದರು.

ಆನಂತರ ಶ್ರೀರಾಯರ ಮೂಲಬೃಂದಾನವಕ್ಕೆ ಶೇಷವಸ್ತ್ರಗಳನ್ನು ಸಮರ್ಪಣೆ ಮಾಡಲಾಯಿತು. ಬಳಿಕ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನಿಟ್ಟು ಚಿನ್ನದ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು.

ನಾದಹಾರ ಸಮರ್ಪಣೆ: ಶ್ರೀಮಠದ ಪ್ರಾಕಾರದಲ್ಲಿ ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಟ್ರಸ್ಟ್‌ನ ನೂರಾರು ಕಲಾವಿದರು 16ನೇ ವರ್ಷದ ನಾದಹಾರ ಸಂಗೀತ ಕಾರ್ಯಕ್ರಮ ನೀಡಿದರು.

ನೂರಾರು ವಾದ್ಯಗಳನ್ನು ಏಕಕಾಲಕ್ಕೆ ನುಡಿಸುವ ಮೂಲಕ ರಾಯರಿಗೆ ನಾದಹಾರ ಸಮರ್ಪಿಸಲಾಯಿತು.ಶೇಷವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದ ಟಿಟಿಡಿಯ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರೆಡ್ಡಿ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು.

ಆನಂತರ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ‘ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಹಾಗೂ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಅವಿನಾಭಾವ ಸಂಬಂಧ ಇದೆ’ ಎಂದರು.

ಶ್ರೀಮಠದ ಗೋ ರಕ್ಷಣೆಗಾಗಿ ವಿಶೇಷ ಆದ್ಯತೆಯನ್ನು ನೀಡಿದೆ. ಬೇಸಿಗೆ ಸಂದರ್ಭದಲ್ಲಿ ಗೋವಿಗಳಿಗೆ ಬಿಸಿಲಿನ ತಾಪ ಕಡಿಮೆ ಮಾಡುವ ಉದ್ದೇಶದಿಂದ ₹14 ಲಕ್ಷ ವೆಚ್ಚದಲ್ಲಿ ಕೊಳವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಂಡಿತ್‌ ರಾಜಾ ಗಿರಿಯಾಚಾರ್, ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್, ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ವಾದಿರಾಜಾಚಾರ್, ಶ್ರೀಮಠದ ಸಹಾಯಕ ಆಡಳಿತಾಧಿಕಾರಿ ಮಾಧವಶೆಟ್ಟಿ, ವಲಯ ವ್ಯವಸ್ಥಾಪಕ ಶ್ರೀಪತಿ, ಸಿಬ್ಬಂದಿ ಐ.ಪಿ ನರಸಿಂಹಮೂರ್ತಿ, ವ್ಯಾಸರಾಜ ಹೊನ್ನಳ್ಳಿ ಹಾಗೂ ಮಾಧ್ಯಮ ವಿಭಾಗದ ಪ್ರಭಾರಿ ಶ್ರೀನಿಧಿ ಕಣಂ, ಛಾಯಾಗ್ರಾಹಕ ಭೀಮಸೇನ ಹಾಗೂ ಶ್ರೀಮಠದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT