ಅಂಗವಿಕಲರಿಗೆ ಸಮಾನ ಅವಕಾಶ

7
ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್‌ ಹೇಳಿಕೆ

ಅಂಗವಿಕಲರಿಗೆ ಸಮಾನ ಅವಕಾಶ

Published:
Updated:
Deccan Herald

ರಾಯಚೂರು: ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ನೀಡಿದಾಗ ಮಾತ್ರ ಅವರೂ ಮುಖ್ಯ ವಾಹಿನಿಯೊಂದಿಗೆ ಬದುಕಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರು ಮಾನಸಿಕವಾಗಿ ಸದೃಢತೆ ಹೊಂದಿರುತ್ತಾರೆ. ದೇಹಕ್ಕೆ ಮಾತ್ರ ಅಂಗವಿಕಲತೆ ಬಂದಿರುತ್ತದೆ. ಅಂಗವಿಕಲರು ಯಾವುದೇ ಕಾರಣಕ್ಕೂ ಖಿನ್ನತೆ ಅನುಭವಿಸಬಾರದು. ಇದಕ್ಕಾಗಿ ಸರ್ಕಾರವೂ ಅನೇಕ ಯೋಜನೆಗಳನ್ನು ರೂಪಿಸಿ ನೆರವು ಒದಗಿಸುತ್ತಿದೆ. ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಗವಿಕಲರನ್ನು ಸಾಮಾನ್ಯ ಜನರಂತೆಯೆ ಗುರುತಿಸಿ ಗೌರವ ಕೊಡುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಸಮಾಜವು ಆಧುನಿಕ ಯುಗದಲ್ಲಿದ್ದು, ಅಂಗವಿಕಲರ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಎಲ್ಲರಂತೆ ಅವರಿಗೂ ಸಮಾನ ಹಕ್ಕುಗಳಿದ್ದು, ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ತಿಳಿಸಿದರು.

ಭಂಡಾರಿ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಿಯಾಜುದ್ದೀನ್‌ ಮಾತನಾಡಿ, ಭಂಡಾರಿ ಆಸ್ಪತ್ರೆಯಿಂದ ಸಾಧ್ಯವಾದಷ್ಟು ಅಂಗವಿಕಲರಿಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದ್ದು, ಐದು ವರ್ಷಗಳಲ್ಲಿ ಸಾವಿರಾರು ಅಂಗವಿಕಲರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಾಗಿದೆ. ಮೈಸೂರು, ಬಾಗಲಕೋಟೆ, ರಾಯಚೂರು ಸೇರಿದಂತೆ ಅನೇಕ ಕಡೆಗಳಲ್ಲಿ 800 ಜನರಿಗೆ ಕೃತಕ ಕಾಲು ಜೋಡಣೆ ಸಲಕರಣೆ ಒದಗಿಸಲಾಗಿದೆ ಎಂದರು.

ಓಪೆಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದ್ದು, ಅಂಗವಿಕಲರಿಗೆ ನಿರಂತರ ಸಲಕರಣೆ ವಿತರಿಸುವ ಕೆಲಸ ನಡೆದಿದೆ. ಅಂಗವಿಕಲರು ಹಿಂಜರಿಕೆ ಮನೋಭಾವ ಬಿಡಬೇಕು. ಸಮಾಜದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಭಂಡಾರಿ ಆಸ್ಪತ್ರೆ ಕೂಡಾ ಅಂಗವಿಕಲರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮನೋ ಚೈತನ್ಯ ಫೌಂಡೇಷನ್‌ ಅಧ್ಯಕ್ಷ ಬಸನಗೌಡ ದೇಸಾಯಿ ಅವರು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀದೇವಿ ನಿಡಗುಂದಿ, ರಾಘವೇಂದ್ರ, ಮೊಹ್ಮದ ಅಲಿ, ಅನಿಲಕುಮಾರ, ನಿಂಗನಗೌಡ, ಅಮರೇಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !