ಶುಕ್ರವಾರ, ಅಕ್ಟೋಬರ್ 22, 2021
29 °C
ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಇಂದಿರಾ ವಸತಿ ಶಾಲೆಯಲ್ಲಿ ಘಟನೆ

ಮಸ್ಕಿ: ವಿದ್ಯಾರ್ಥಿನಿಯರ ಕೈ ಹಿಡಿದು ಎಳೆದಾಡಿದ ಶಿಕ್ಷಕರು, ವಿಡಿಯೊದಲ್ಲಿ ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಇಂದಿರಾ ಗಾಂಧಿ ಪರಿಶಿಷ್ಟ ವರ್ಗಗಳ ವಸತಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ವಿದ್ಯಾರ್ಥಿನಿಯರ ಕೈ ಹಿಡಿದು ಎಳೆದಾಡಿದ ಘಟನೆ ಈಚೆಗೆ ನಡೆದಿದೆ. ಈ ಕುರಿತು ವಿಡಿಯೊ ಬಹಿರಂಗ ಆಗುತ್ತಲೇ ಶಿಕ್ಷಕರು ಶುಕ್ರವಾರ ಶಾಲೆಯಿಂದ ಪರಾರಿಯಾಗಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ ಮತ್ತು ಗಣಿತ ವಿಷಯ ಬೋಧಿಸುವ ಅತಿಥಿ ಶಿಕ್ಷಕ ಬಸವರಾಜ ಅವರು ಪ್ರೌಢಶಾಲಾ ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ ವರ್ತಿಸಿದ್ದರು ಎನ್ನಲಾಗಿದೆ.

ವಸತಿ ನಿಲಯದ ಕಸ ಗುಡಿಸುವಂತೆ ಮತ್ತು ತಮ್ಮ ಬಟ್ಟೆ ತೊಳೆಯುವಂತೆ ಶಿಕ್ಷಕರು ತಮ್ಮನ್ನು ಒತ್ತಾಯಿಸುತ್ತಿದ್ದರು ಎಂದು ವಿದ್ಯಾರ್ಥಿನಿಯರು ಹೇಳಿದರು.

ಘಟನೆ ಬಹಿರಂಗವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಪ್ರಾಚಾರ್ಯ ಸೈಯದ್ ಮುಷೀರ್ ಅಹ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ವಸತಿ ನಿಲಯದಲ್ಲಿ ಶಿಕ್ಷಕರು ಬಾಲಕಿಯರಿಗೆ ಕಿರುಕುಳ ನೀಡುವುದು ಸೇರಿದಂತೆ ಅನುಚಿತ ಘಟನೆಗಳು ನಡೆಯುತ್ತಿರುವ ಕುರಿತು ಪ್ರಾಚಾರ್ಯರಿಗೆ ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ವಸತಿ ಶಾಲೆಗೆ ಕಾಯಂ ಪ್ರಾಚಾರ್ಯರನ್ನು ನೇಮಿಸಬೇಕು’ ಎಂದು ಗ್ರಾಮದ ಯುವ ಮುಖಂಡರಾದ ಶಿವಕುಮಾರ ಪಾಟೀಲ್‍ ಮತ್ತು ಆದನಗೌಡ ಆಗ್ರಹಿಸಿದರು.

ಪ್ರಾಚಾರ್ಯ ಮತ್ತು ವಸತಿ ನಿಲಯದ ಮೇಲ್ವಿಚಾರಕ ಹುದ್ದೆ ಪಡೆಯಲು ಪೈಪೋಟಿ ನಡೆಸುತ್ತಿದ್ದ ಶಿಕ್ಷಕ ವೆಂಕಟೇಶ ಅವರು ಪ್ರಾಚಾರ್ಯ ಹಾಗೂ ಮೇಲ್ವಿಚಾರಕರ ವಿರುದ್ಧ ಮಕ್ಕಳು ಮತ್ತು ಪಾಲಕರಿಗೆ ತಪ್ಪು ಮಾಹಿತಿ ನೀಡಿ ತೊಂದರೆ ಕೊಡುತ್ತಿದ್ದರು ಎನ್ನಲಾಗಿದೆ.

‘ಇಬ್ಬರು ಶಿಕ್ಷಕರ ಕಿರುಕುಳ ಹೆಚ್ಚುತ್ತಿರುವುದರಿಂದ, ತಮ್ಮನ್ನು ಎರವಲು ಸೇವೆಯಿಂದ ಬಿಡುಗಡೆ ಮಾಡುವಂತೆ ಹಿರಿಯ ಅಧಿಕಾರಿಗಳಲ್ಲಿ ಈಗಾಗಲೇ ಮನವಿ ಮಾಡಲಾಗಿದೆ‘ ಎಂದು  ಪ್ರಾಚಾರ್ಯ ಸೈಯದ್ ಮುಷೀರ್ ಅಹ್ಮದ್ ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಚಿದಾನಂದ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ, ‘ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶರಣಗೌಡ ಮತ್ತು ಕವಿತಾಳ ಠಾಣೆ ಸಬ್‍ ಇನ್‍ಸ್ಪೆಕ್ಟರ್‍ ಎಂ.ವೆಂಕಟೇಶ ಅವರು ಸ್ಥಳಕ್ಕೆ ಭೇಟಿ ಮಾಹಿತಿ ಪಡೆದರು.

***
ಶಿಕ್ಷಕರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಕುರಿತು ಯಾವೊಬ್ಬ ವಿದ್ಯಾರ್ಥಿ ಇದುವರೆಗೂ ನನ್ನ ಗಮನಕ್ಕೆ ತಂದಿಲ್ಲ. ವಿಡಿಯೊ ಬಹಿರಂಗವಾದ ನಂತರ ಮಾಹಿತಿ ಗೊತ್ತಾಗಿದೆ. ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
- ಸೈಯದ್ ಮುಷೀರ್ ಅಹ್ಮದ್, ಪ್ರಭಾರ ಪ್ರಾಚಾರ್ಯ

ಇಬ್ಬರು ಶಿಕ್ಷಕರು ನನ್ನ ಬಗ್ಗೆ ಪ್ರಾಚಾರ್ಯರು, ಪಾಲಕರು ಮತ್ತು ಮಕ್ಕಳ ಮುಂದೆ ಅನಗತ್ಯ ಆರೋಪ ಮಾಡಿ, ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇಲ್ಲಿ ಸೇವೆಗೆ ಬಂದು ಕೇವಲ ಒಂದು ತಿಂಗಳಾಗಿದ್ದು ಅವರ ಕಿರುಕುಳದಿಂದ ಬೇಸತ್ತಿದ್ದೇನೆ.
- ಪ್ರಕಾಶ ಬೀದರ್, ವಸತಿ ನಿಲಯದ ಮೇಲ್ವಿಚಾರಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು