ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಹರಿದಾಸ ಅಧ್ಯಯನ ಪೀಠ ಚಟುವಟಿಕೆ ಆರಂಭಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದಾಸರ ಊರಾದ ರಾಯಚೂರಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಆರಂಭಿಸಿರುವ ಹರಿದಾಸ ಅಧ್ಯಯನ ಪೀಠವನ್ನು ಕಲಬುರ್ಗಿಗೆ ಸ್ಥಳಾಂತರಿಸದೇ ಇಲ್ಲಿಯೇ ಕಾರ್ಯಚಟುವಟಿಕೆ ಆರಂಭಿಸಬೇಕು ಎಂದು ಅನುಷ್ಠಾನ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ಸಾವಿತ್ರಿ ಕಾಲೊನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಪೀಠದ ಕಾರ್ಯಚಟುವಟಿಕೆಗಳ ಅನುಷ್ಠಾನ ಸಭೆಯಲ್ಲಿ ಸಂಘ-ಸಂಸ್ಥೆಗಳು ಹಾಗೂ ಸಾಹಿತ್ಯಾಸಕ್ತರು ಸಂಪೂರ್ಣ ಬೆಂಬಲ ನೀಡಿದರು.

ಹರಿದಾಸ ಅಧ್ಯಯನ ಪೀಠದ ನೂತನ ಸದಸ್ಯೆ ಜಯಲಕ್ಷ್ಮೀ ಮಂಗಳಮೂರ್ತಿ ಮಾತನಾಡಿ, ಹರಿದಾಸ ಸಾಹಿತ್ಯ ಅಧ್ಯಯನ ಪೀಠ 2007ರಲ್ಲಿಯೇ ರಾಯಚೂರಿನಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಪುನಶ್ಚೇತನಗೊಳಿಸಲು ವಿಶ್ವವಿದ್ಯಾಲಯ ನಿರ್ಧರಿಸಿರುವುದರಿಂದ ರಚನಾತ್ಮಕ ಹಾಗೂ ಪರಿಣಾಮಕಾರಿಯಾಗಿ ಕಾರ್ಯವನ್ನು ಆರಂಭಿಸಬೇಕಾಗಿದ್ದು, ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಜಯಭಾಸ್ಕರ ಮಾತನಾಡಿ, ಅಧ್ಯಯನ ಪೀಠವನ್ನು ಕಲಬುರ್ಗಿಗೆ ಸ್ಥಳಾಂತರಿಸಲು ಪ್ರಯತ್ನಿಸಿದ್ದರಿಂದ ಪ್ರತಿಭಟಿಸಿ ರಾಯಚೂರಿನಲ್ಲಿ ಉಳಿಯುವಂತೆ ಮಾಡಲಾಗಿದೆ. ಆದರೆ, ಇದಕ್ಕೆ ಯಾವುದೇ ಆರ್ಥಿಕ ಸಹಕಾರವಿಲ್ಲ. ಆರ್ಥಿಕವಾಗಿ ಸಬಲೀಕರಣಗೊಳಿಸಲು ಪ್ರಯತ್ನಿಸಿ ವಿಶ್ವವಿದ್ಯಾಲಯದಲ್ಲಿ ಇರುವ ಪೀಠಗಳಿಗೆ ಮಾದರಿಯಾಗುವ ಹಾಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸದಸ್ಯೆ ನಿರ್ಮಲಮಾನೆ ಮಾತನಾಡಿ, ದಾಸ ಹಾಗೂ ವಚನ ಸಾಹಿತ್ಯ ಎರಡು ಕಣ್ಣುಗಳು ಇದ್ದ ಹಾಗೆ, ಆದರೆ ವಚನ ಸಾಹಿತ್ಯದಲ್ಲಿ ಆಗಿರುವ ಸಂಶೋಧನೆ ದಾಸ ಸಾಹಿತ್ಯದಲ್ಲಿ ಆಗಿಲ್ಲ. ಈ ನಿಟ್ಟಿನಲ್ಲಿ ಅಧ್ಯಯನ ಪೀಠ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಶಿಕ್ಷಣಾಧಿಕಾರಿ ಆರ್.ಇಂದಿರಾ ಮಾತನಾಡಿ, ಹಳ್ಳಿಗಾಡಿನಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪೀಠ ಮಾಡಬೇಕು ಎಂದು ತಿಳಿಸಿದರು.

ಆರ್.ಡಿ.ಎ. ಮಾಜಿ ಅಧ್ಯಕ್ಷ ಜಗನ್ನಾಥ ಕುಲಕರ್ಣಿ, ಸಾಹಿತಿ ರಾಮಣ್ಣ ಹವಳೆ, ಸೇತುಮಾಧವ ಕನಕವೀಡು, ಕೆ.ರಾಮಕೃಷ್ಣ, ಭೀಮನಗೌಡಇಟಗಿ, ಪ್ರಹ್ಲಾದಾಚಾರ್ಯ ಬಾಂಬೆ, ಪ್ರಹ್ಲಾದ್ ಫಿರೋಜಾಬಾದ್, ಪಲುಗುಲನಾಗರಾಜ, ಶ್ಯಾಮಸುಂದರ ಪಟವಾರಿ, ರವೀಂದ್ರ ಕುಲಕರ್ಣಿ, ಲಕ್ಷ್ಮೀಕಾಂತ ಮೋಹರೇರ್, ಅರುಣ ಕಾಂತನವರ, ವಿಷ್ಣುತೀರ್ಥ ಸಿರವಾರ, ಪ್ರಮೋದಕಟ್ಟಿ, ಶೇಷಗಿರಿರಾವ್ ಕುಲಕರ್ಣಿ, ರಾಜಶ್ರೀ ಕಲ್ಲೂರಕರ್ ಮಾತನಾಡಿದರು. ಗುರುರಾಜ, ಶ್ಯಾಮಸುಂದರಮುತಾಲಿಕ್, ಆಂಜನೇಯ ಜಾಲಿಬೆಂಚಿ, ಶ್ರೀನಿವಾಸಗಟ್ಟು ಇದ್ದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು