ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಟ್ಟಿ: 1,889 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ’

ಹಟ್ಟಿ ಚಿನ್ನದ ಗಣಿ: 2021–22ನೇ ಸಾಲಿನ ಸಾಧನೆ
Last Updated 9 ಏಪ್ರಿಲ್ 2022, 5:24 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿಯು ಮಾರ್ಚ್‌ಗೆ ಕೊನೆಗೊಂಡ 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ 1,238 ಕೆ.ಜಿ. ಚಿನ್ನ ಉತ್ಪಾದಿಸಿದೆ ಎಂದು ಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ಶುಕ್ರವಾರ ಇಲ್ಲಿ ತಿಳಿಸಿದರು.

ಗಣಿ ಕಂಪನಿಯ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, 4,78,514 ಟನ್ ಅದಿರು ಸಂಸ್ಕರಿಸಿ 1,238 ಕೆ.ಜಿ.ಚಿನ್ನ ಉತ್ಪಾದಿಸಲಾಗಿದೆ. 5,25,457 ಟನ್ ಅದಿರು ಸಂಸ್ಕರಿಸಿ 1,522 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಅನೇಕ ಅಡೆತಡೆಗಳಿಂದ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದರು.

ಕೋವಿಡ್ ಪರಿಣಾಮದಿಂದ ಕಳೆದ ಆರ್ಥಿಕ ವರ್ಷದ ಆರಂಭದ ಎರಡು-ಮೂರು ತಿಂಗಳು ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಲಾಗಿದೆ. ಹೀಗಾಗಿ ನಿಗದಿತ ಗುರಿ ಮುಟ್ಟಲು ಆಗಿಲ್ಲ. 284 ಕೆ.ಜಿ.ಯಷ್ಟು ಚಿನ್ನ ಕಡಿಮೆ ಉತ್ಪಾದನೆಯಾದರೂ ಗಣಿ ಕಂಪನಿಯ ಹಣಕಾಸು ಪರಿಸ್ಥಿತಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡು ಬಂದಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಉತ್ತಮ ಬೆಲೆ ಇರುವುದರಿಂದ ಯಾವ ತೊಂದರೆ ಇಲ್ಲ ಎಂದರು.

ಮುಂದಿನ ಆರ್ಥಿಕ ವರ್ಷದಲ್ಲಿ (2022-2023) ಚಿನ್ನದ ಬೆಲೆ, ಕಾರ್ಮಿಕರ ಸಂಬಳ ಹಾಗೂ ಗಣಿ ಕಂಪನಿಯ ಇತರೆ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು 7,53,000 ಟನ್ ಅದಿರು ಸಂಸ್ಕರಿಸಿ 1,889 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ನಿಗದಿಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಮಾನವ ಸಂಪನ್ಮೂಲ ಹೆಚ್ಚಿಸಿ ಗುರಿ ಮೀರಿ ಚಿನ್ನ ಉತ್ಪಾದಿಸಲು ಪ್ರಯತ್ನಿಸಲಾಗುವುದು. ಹೊಸದಾಗಿ ನೇಮಕಾತಿ ಸಂಬಂಧ ನಿರ್ದೇಶಕ ಮಂಡಳಿ ಒಪ್ಪಿಗೆ ಸೂಚಿಸಿದೆ. ಸರ್ಕಾರದ ಅನುಮೋದನೆಗೆ ಕಳಿಸಲಾಗಿದೆ. ಅನುಮೋದನೆ ದೊರೆತ ನಂತರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT