ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 77ನೇ ವಸಂತಕ್ಕೆ ಕಾಲಿಟ್ಟ ಹಟ್ಟಿ ಚಿನ್ನದ ಗಣಿ

Published 8 ಜುಲೈ 2023, 6:34 IST
Last Updated 8 ಜುಲೈ 2023, 6:34 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ರಾಷ್ಟ್ರದ ಚಿನ್ನ ಉತ್ಪಾದನಾ ಉದ್ದಿಮೆ ಎಂಬ ಹೆಗ್ಗಳಿಕೆಯ ಹಟ್ಟಿ ಚಿನ್ನದ ಗಣಿ ಕಂಪನಿಯು 76ನೇ ವಸಂತಗಳನ್ನು ಪೂರೈಸಿ 77ನೇ ವರ್ಷಕ್ಕೆ ಕಾಲಿಟ್ಟಿದೆ.

ರಾಜ್ಯ ಸರ್ಕಾರ ಸ್ವಾಮ್ಯದಲ್ಲಿರುವ ಈ ಕಂಪನಿಯಲ್ಲಿ ಒಟ್ಟು 4,200 ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಿತ್ಯ ಹಲವು ಕೆ.ಜಿ ಬಂಗಾರ ಉತ್ಪಾದನೆಯಾಗುತ್ತಿದೆ.

ಕಂಪನಿ ಅಡಿಯಲ್ಲಿ ‌ಮೂರು ಘಟಕಗಳಿದ್ದು, ಮೂರು ಪಾಳೆಗಳಲ್ಲಿ ಕೆಲಸ ನಡೆಯುತ್ತಿದೆ. ಪ್ರತಿ ಘಟಕದಲ್ಲಿ ಪ್ರತಿ ಪಾಳೆಯಲ್ಲಿ 250ರಿಂದ 300 ಮಂದಿ ದುಡಿಯುತ್ತಿದ್ದಾರೆ. 2022-2023ರಲ್ಲಿ ನಿತ್ಯ ಸರಾಸರಿ 3.86 ಕೆ.ಜಿ ಚಿನ್ನ ಉತ್ಪಾದಿಸಲಾಗಿದೆ.

ದಶಕಗಳ ಇತಿಹಾಸ

ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸಿದ ಬಗ್ಗೆ ನೂರಾರು ವರ್ಷಗಳ ಇತಿಹಾಸವಿದೆಯಾದರೂ, 1947 ಜುಲೈ 8ರಂದು ಮೊದಲ ಬಾರಿಗೆ ‘ಹೈದರಾಬಾದ್‌ ಹಟ್ಟಿ ಚಿನ್ನದ ಗಣಿ’ ಎಂಬ ಹೆಸರಿನಲ್ಲಿ ಅಧಿಕೃತವಾಗಿ ನೋಂದಾಯಿತವಾಗಿದೆ.

ಭಾಷವಾರು ಪ್ರಾಂತ್ಯಗಳ ಪುನರ್ ವಿಂಗಡನೆ ನಂತರ 1956ರಲ್ಲಿ ಈ ಕಂಪನಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿತ್ತು. ಆಗ ‘ದಿ ಹಟ್ಟಿ ಚಿನ್ನದ ಗಣಿ ಕಂಪನಿ’ ಎಂದು ಮರು ನಾಮಕರಣಗೊಂಡಿತು.

ಹಲವು ಏಳು–ಬೀಳು

‘ಕಳೆದ 76 ವರ್ಷದಲ್ಲಿ ಗಣಿ ಕಂಪನಿ ಹಲವು ಏಳು ಬೀಳು ಕಂಡಿದೆ. ಚಿನ್ನದ ಬೆಲೆ ಏರಿಕೆ ಹಾಗೂ ಉತ್ಪಾದನೆಯಲ್ಲಿ ಸಾಧಿಸಿ ಪ್ರಗತಿಯಿಂದ ಕಳೆದೆರಡು ದಶಕದಿಂದ ಗಣಿ ಕಂಪನಿ ಲಾಭದಲ್ಲಿದೆ. 1998ದಿಂದ 2002 ಅವಧಿಯಲ್ಲಿ ಚಿನ್ನದ ಬೆಲೆ ಕುಸಿದಿದ್ದಾಗ ಗಣಿ ಕಂಪನಿ ಹಲವು ಸಂಕಷ್ಟಗಳನ್ನು ಎದುರಿಸಿತ್ತು’ ಎನ್ನುತ್ತಾರೆ ಇಲ್ಲಿನ ಕಾರ್ಮಿಕರು.

1998ರಲ್ಲಿ ಗಣಿ ಕಂಪನಿ ವಿವಿಧ ಮೂಲಗಳಿಂದ ಸಾಲ ಪಡೆದರೂ ಕಾರ್ಮಿಕರಿಗೆ ಸಂಬಳ ಕೊಡಲು ಆಗದಂತಹ ಸ್ಧಿತಿ ಎದುರಾಗಿತ್ತು. ಆಗ ಬೆಂಗಳೂರಿನಲ್ಲಿ ಇದ್ದ ಗಣಿ ಕಂಪನಿಯ ನೋಂದಾಯಿತ ಕಚೇರಿಯನ್ನೆ ಮಾರಾಟ ಮಾಡಿ ಕಾರ್ಮಿಕರಿಗೆ ಸಂಬಳ ಕೊಟ್ಟ ಉದಾಹರಣೆಯೂ ಇದೆ. ಸಂಬಳ ಹಾಗೂ ಸೌಲಭ್ಯ ಕಡಿತವಾದರೂ ಕಾರ್ಮಿಕರು ಅಸಹಕಾರ ತೋರಲಿಲ್ಲ. ಮುಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಚೇತರಿಕೆ ಕಂಡಾಗ ಎಲ್ಲ ಸಂಕಷ್ಟಗಳು ನಿವಾರಣೆಯಾಗಿ ಕಾರ್ಮಿಕರ ಮೊಗದಲ್ಲಿ ಮುಗುಳ್ನಗೆ ಮೂಡಿತು’ ಎನ್ನುತ್ತಾರೆ ಹಿರಿಯ ಕಾರ್ಮಿಕರು.

ಹಟ್ಟಿ ಚಿನ್ನದ ಗಣಿ ಕಂಪನಿಯು ಚಿನ್ನ ಉತ್ಪಾದನೆ ಜೊತೆಗೆ ರಾಜ್ಯದ ವಿವಿಧೆಡೆ ಚಿನ್ನದ ನಿಕ್ಷೇಪಗಳ ಪತ್ತೆ, ಅವುಗಳ ಅಭಿವೃದ್ಧಿಯಲ್ಲೂ ತೊಡಗಿದೆ.

ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ಅಜ್ಜನ ಹಳ್ಳಿಯಳ್ಳಿಯಲ್ಲಿ ತಲಾ ಒಂದು ಚಿನ್ನದ ಘಟಕ ಸ್ಧಾಪಿಸಿತ್ತು. ಹಲವು ವರ್ಷಗಳ ಚಿನ್ನದ ಅಧಿರು ತೆಗೆಯಲಾಯಿತು. ಆದರೆ, ಅಲ್ಲಿ ಸದ್ಯ ಚಿನ್ನದ ಅದಿರು ತೆಗೆಯುವುದನ್ನು ನಿಲ್ಲಿಸಿ ಪವನ (ಗಾಳಿ) ಯಂತ್ರಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮತ್ತೊಂದೆಡೆ ದೇವದುರ್ಗ ತಾಲ್ಲೂಕಿನ ಊಟಿ, ಸಿರವಾರ ತಾಲ್ಲೂಕಿನ ಹೀರಾಬುದ್ದಿನಿ ಗ್ರಾಮಗಳಲ್ಲಿ ಚಿನ್ನದ ಅದಿರು ತೆಗೆದು ಹಟ್ಟಿ ಚಿನ್ನದ ಗಣಿ ಘಟಕಕ್ಕೆ ರವಾನಿಸಲಾಗುತ್ತಿದೆ.

1,889 ಕೆ.ಜಿ ಉತ್ಪಾದನೆ ಗುರಿ

ಜುಲೈ 8 ಹಟ್ಟಿ ಚಿನ್ನದ ಗಣಿ ಕಂಪನಿ ಸಂಸ್ಧಾಪನಾ ದಿನ. ಗಣಿ ಅಭಿವೃದ್ದಿಯಲ್ಲಿ ಕಾರ್ಮಿಕರ ಶ್ರಮ ಪ್ರಮುಖವಾಗಿದೆ. ಹಲವು ವರ್ಷಗಳಿಂದ ಚಿನ್ನದ ಉತ್ಪಾದನೆ ಹೆಚ್ಚುತ್ತಿದೆ. 2020-21ರಲ್ಲಿ 1,115 ಕೆ.ಜಿ ಚಿನ್ನ ಉತ್ಪಾದಿಸಲಾಗಿತ್ತು. 2021-2022ರಲ್ಲಿ 1,238 ಕೆ.ಜಿ ಬಂಗಾರ ಉತ್ಪಾದಿಸಲಾಗಿತ್ತು. 2022-2023ರಲ್ಲಿ 1,411 ಕೆ.ಜಿ ಚಿನ್ನ ಉತ್ಪಾದಿಸಲಾಗಿದ್ದು, 2023-24ನೇ ಸಾಲಿನಲ್ಲಿ 1,889 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT