ಬುಧವಾರ, ಫೆಬ್ರವರಿ 19, 2020
28 °C

ಭ್ರಷ್ಟಾಚಾರ ಹತೋಟಿಗೆ ತರದ ಸರ್ಕಾರ: ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಬಿಜೆಪಿ ನಾಯಕರೇ ಹೇಳಿದ್ದು; ಹಿರಿಯ ಅಧಿಕಾರಿಗಳಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ; ಹತೋಟಿಗೆ ತರಲು ಆಗುತ್ತಿಲ್ಲ ಎಂದು. ಬಿಜೆಪಿಯ ಒಂದು ಗುಂಪು ಹೈಕಮಾಂಡ್‌ಗೆ ದೂರು ಕೊಟ್ಟಿದೆ. ಆ ಬಗ್ಗೆ ನಾನೇನು ಮಾತನಾಡಲಾರೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಸದ್ಯ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಪ್ರಾದೇಶಿಕ ಪಕ್ಷಗಳ ಮುಂದಿನ ಪಾತ್ರ ಏನು ಎಂಬುದಷ್ಟೇ ನನ್ನ ಚಿಂತನೆಯಾಗಿದೆ. ಪ್ರಾದೇಶಿಕ ಪಕ್ಷಗಳು ಬಲಯುತವಾಗಿವೆ. 2014ರಲ್ಲಿ ಬಿಜೆಪಿ 283 ಸೀಟುಗಳನ್ನು ಗೆದ್ದಿತ್ತು. ಸ್ವಂತ ಶಕ್ತಿ ಮೇಲೆ ಸರ್ಕಾರದ ಮೇಲೆ ಸರ್ಕಾರ ನಡೆಸಬಹುದಿದ್ದರೂ ಪ್ರಾದೇಶಿಕ ಪಕ್ಷಗಳ ಸೇರಿಸಿಕೊಂಡು ಸರ್ಕಾರ ನಡೆಸಿತ್ತು’ ಎಂದರು.

‘2019ರ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ಪಡೆಯಿತು. ಬಿಜೆಪಿಗೆ 303 ಸ್ಥಾನಗಳು ಇದ್ದರೂ. ಈಚೆಗೆ ನಡೆದ ಚುನಾವಣೆಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ದೆಹಲಿ ಚುನಾವಣೆಯಲ್ಲಿ ಐದು ಸ್ಥಾನ ಹೆಚ್ಚಾಗಿದ್ದರೂ ಶೇಕಡವಾರು ಮತದಾನದಲ್ಲಿ ಕುಸಿತ ಕಂಡಿದೆ. ಇನ್ನೊಂದು ರಾಷ್ಟ್ರೀಯ ಪಕ್ಷ ಸಂಕಟದಲ್ಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸದ್ಯಕ್ಕಂತೂ ಚುನಾವಣೆಗಳಿಲ್ಲ. ಕಾಂಗ್ರೆಸ್‌ನ್ನು ಜಾತ್ಯತೀತ ಪಕ್ಷ ಎನ್ನಲಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಬಗ್ಗೆ ವಿಶ್ಲೇಷಣೆ ಮಾಡವುದಿಲ್ಲ. ನಾವೇನು ಅಪೇಕ್ಷೆ ಪಟ್ಟಿರಲಿಲ್ಲ. ಜೆಡಿಎಸ್ ಸೋಲಲಿ ಗೆಲ್ಲಲಿ ಉಳಿಸಿಕೊಂಡು ಹೊರಟಿದ್ದೇವೆ. ಪಕ್ಷ ಹೇಗೆ ಶಕ್ತಿಯುತವಾಗಬೇಕು. ನಮ್ಮ ರಾಜಕಾರಣ ಭಿನ್ನವಾಗಿದೆ’ ಎಂದು ತಿಳಿಸಿದರು.

‘ಯಾರ‍್ಯಾರು ಯಾವ ಕಾಲದಲ್ಲಿ ಏನು ಮಾಡಿದರು. ಯಾರು ಪೆಟ್ಟು ಕೊಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಪುಸ್ತಕ ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಜನರ ಮುಂದಿಡಬೇಕು. ಅಧಿಕಾರಕ್ಕೆ ಬರುವುದು ಮುಖ್ಯವಲ್ಲ. ವಾಸ್ತವಾಂಶ ಬಿಚ್ಚಿಡುವ ಕೆಲಸ ಮಾಡುತ್ತೇನೆ. ಯಾವ ಕಾಲದಲ್ಲಿ ಏನಾಗಿತ್ತು ಎಂಬುದೆಲ್ಲ ಪುಸ್ತಕದಲ್ಲಿ ವಿವರಿಸಿದ್ದೇನೆ’ ಎಂದು ಹೇಳಿದರು.

‘ನೀರಾವರಿಗೆ ಪ್ರಥಮ ಬಾರಿಗೆ ₹20ಸಾವಿರ ಕೋಟಿ ವೆಚ್ಚದಲ್ಲಿ ಬಿ ಸ್ಕೀಂ ಆರಂಭಿಸಿದ್ದೆ. ಅಂದು ಚಂದ್ರಬಾಬು ನಾಯ್ದು ವಿರೋಧಿಸಿದ್ದರು. 2ನೇ ಪಂಚವಾರ್ಷಿಕ ಯೋಜನೆಯಡಿ ಕೈಗೊಂಡ ಕಾಮಗಾರಿ ಇನ್ನೂ ಆಗಿಲ್ಲ. ಆದರೆ, ನಾನು ಮಾಡಿದ್ದೆ’ ಎಂದರು.

‘ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಕರಿಯಮ್ಮರಿಗೆ ಸೀಟು ಕೊಡುವ ತೀರ್ಮಾನವಾಗಿತ್ತು. ಆದರೆ, ನಾಯಕರ ಕೊರತೆ ಇದೆ. ಕಟು ಅನುಭವವಾಗಿದೆ. ಕುಮಾರಸ್ವಾಮಿ ಸರ್ಕಾರ ಮಾಡಿದ್ದು ನಮ್ಮ ಅಪೇಕ್ಷೆಯಿಂದಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿದರೆ ನಾವು ಒಪ್ಪುತ್ತೇವೆ’ ಎಂದು ಹೇಳಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು