ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: MI vs PBKS- ಮುಂಬೈ ತಂಡಕ್ಕೆ ರೋಚಕ ಜಯ

ಸೂರ್ಯಕುಮಾರ್‌ ಅರ್ಧಶತಕ: ಜೆರಾಲ್ಡ್‌, ಬ್ರೂಮ್ರಾಗೆ ಮೂರು ವಿಕೆಟ್‌; ಪಂಜಾಬ್‌ಗೆ ಮತ್ತೆ ಸೋಲು
Published 18 ಏಪ್ರಿಲ್ 2024, 18:52 IST
Last Updated 18 ಏಪ್ರಿಲ್ 2024, 18:52 IST
ಅಕ್ಷರ ಗಾತ್ರ

ಮುಲ್ಲನಪುರ, ಪಂಜಾಬ್: ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕ ಮತ್ತು ವೇಗದ ಬೌಲರ್‌ಗಳಾದ ಜೆರಾಲ್ಡ್ ಕೋಟ್ಜಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ನ ರೋಚಕ ಹಣಾಹಣಿಯಲ್ಲಿ 9 ರನ್‌ಗಳಿಂದ ಪಂಜಾಬ್‌ ತಂಡವನ್ನು ಮಣಿಸಿತು.

ಮಹಾರಾಜ ಯಾದವೇಂದ್ರಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೂರ್ಯಕುಮಾರ್‌ (78; 53ಎ) ಅವರ ಆಟದ ಬಲದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 192 ರನ್ ಕಲೆ ಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್‌ ತಂಡಕ್ಕೆ ಮುಂಬೈನ ವೇಗದ ಬೌಲರ್‌ಗಳಾದ ಜೆರಾಲ್ಡ್ ಮತ್ತು ಬೂಮ್ರಾ ಆರಂಭದಲ್ಲೇ ಪೆಟ್ಟು ನೀಡಿದರು. ಕೇವಲ 14 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ತಂಡವು ಸಂಕಷ್ಟಕ್ಕೆ ಸಿಲುಕಿತು. ನಾಯಕ ಸ್ಯಾಮ್ ಕರನ್ (6), ಪ್ರಭಸಿಮ್ರನ್ ಸಿಂಗ್ (0), ರಿಲೀ ರೋಸೌವ್ (1) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (1) ವೈಫಲ್ಯ ಅನುಭವಿಸಿದರು.

ನಂತರ ಬಂದ ಹರಪ್ರೀತ್‌ ಸಿಂಗ್‌ (13) ಮತ್ತು ಜಿತೇಶ್‌ ಶರ್ಮಾ (9) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್‌ ಸಿಂಗ್‌ (41; 25ಎ) ಮತ್ತು ಅಶುತೋಷ್‌ ಶರ್ಮಾ (61;28ಎ, 4x2, 6x7) ಹೋರಾಟ ತೋರಿದರು. ಅವರು ಏಳನೇ ವಿಕೆಟ್‌ ಜೊತೆಯಾಟದಲ್ಲಿ ಅವರು 17 ಎಸೆತಗಳಲ್ಲಿ 34 ರನ್‌ ಸೇರಿಸಿದರು.

ಶಶಾಂಕ್‌ ನಿರ್ಗಮಿಸಿದ ಬಳಿಕ ಹರಪ್ರೀತ್‌ ಬ್ರಾರ್‌ (21) ಅವರೊಂದಿಗೆ ಅಶುತೋಷ್‌ 8 ವಿಕೆಟ್‌ಗೆ 32 ಎಸೆತದಲ್ಲಿ 57 ರನ್‌ ಸೇರಿಸಿ ತಂಡವನ್ನು ಗೆಲುವಿನ ಆಸೆ ಚಿಗುರಿಸಿದರು. ಈ ಹಂತದಲ್ಲಿ ಜಯಕ್ಕೆ 18 ಎಸೆತದಲ್ಲಿ ಕೇವಲ 25 ರನ್‌ ಅಗತ್ಯವಿತ್ತು. ಆದರೆ, 18ನೇ ಓವರ್‌ನಲ್ಲಿ ಅಶುತೋಷ್‌ ಅವರು ಜೆರಾಲ್ಡ್‌ ಅವರಿಗೆ ವಿಕೆಟ್‌ ಒಪ್ಪಿಸುವುದರೊಂದಿಗೆ ಪಂದ್ಯವು ಮತ್ತೆ ಮುಂಬೈನತ್ತ ವಾಲಿತು. ಜೆರಾಲ್ಡ್‌ ಮತ್ತು ಬೂಮ್ರಾ ತಲಾ ಮೂರು ವಿಕೆಟ್‌ ಪಡೆದರು. ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಗೋಪಾಲ್‌ ಮತ್ತು ಆಕಾಶ್‌ ಮಧ್ವಲ್ ತಲಾ ಒಂದು ವಿಕೆಟ್‌ ಪಡೆದರು.

ಸೂರ್ಯ ಮಿಂಚಿನ ಅರ್ಧಶತಕ: ಇದಕ್ಕೂ ಮೊದಲು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಇಶಾನ್ ಕಿಶನ್ (8 ರನ್) ಔಟಾದರು. ಕ್ರೀಸ್‌ನಲ್ಲಿದ್ದ ರೋಹಿತ್ ಅವರೊಂದಿಗೆ ಸೇರಿದ ಸೂರ್ಯ ಎರಡನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು. 

ರೋಹಿತ್ ಮೂರು ಸಿಕ್ಸರ್, ಎರಡು ಬೌಂಡರಿಗಳಿದ್ದ 36 ರನ್ ಗಳಿಸಿದರು. ಸೂರ್ಯ ತಮ್ಮ ಎಂದಿನ ಶೈಲಿಯಲ್ಲಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ಸ್ಕೂಪ್‌, ಫ್ಲಿಕ್, ಡ್ರೈವ್‌ಗಳ ಮೂಲಕ ರನ್‌ ಸೂರೆ ಮಾಡಿದರು. 7 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. 34 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು.

12ನೇ ಓವರ್‌ನಲ್ಲಿ ರೋಹಿತ್ ಅವರು ಸ್ಯಾಮ್‌ ಕರನ್ ಬೌಲಿಂಗ್‌ನಲ್ಲಿ ಹರಪ್ರೀತ್ ಬ್ರಾರ್‌ಗೆ ಕ್ಯಾಚಿತ್ತರು. ಸೂರ್ಯ ಜೊತೆಗೂಡಿದ ತಿಲಕ್ ವರ್ಮಾ (ಔಟಾಗದೆ 34) ರನ್‌ ಗಳಿಕೆಗೆ ವೇಗ ನೀಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 49 ರನ್‌ ಸೇರಿಸಿದರು. 17ನೇ ಓವರ್‌ನಲ್ಲಿ ಸೂರ್ಯ ಕ್ಯಾಚ್ ಪಡೆದ ಪ್ರಭಸಿಮ್ರನ್ ಸಿಂಗ್ ಸಂಭ್ರಮಿಸಿದರು. ಕರನ್ ವಿಕೆಟ್ ಪಡೆದರು. 

ಆದರೆ ಇದಾದ ನಂತರದ 22 ಎಸೆತಗಳಲ್ಲಿ ಮುಂಬೈ ಖಾತೆಗೆ 44 ರನ್‌ಗಳು ಹರಿದುಬಂದವು. ಇದಕ್ಕೆ ಕಾರಣವಾಗಿದ್ದು ವರ್ಮಾ ಅವರ ಬೀಸಾಟ. ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆದರು. ಹಾರ್ದಿಕ್ 6 ಎಸೆತಗಳಲ್ಲಿ 10 ಹಾಗೂ ಟಿಮ್ ಡೇವಿಡ್ 7 ಎಸೆತಗಳಲ್ಲಿ 14 ರನ್‌ಗಳ ಕಾಣಿಕೆ ನೀಡಿದರು. ಪಂಜಾಬ್ ವೇಗಿ ಹರ್ಷಲ್ ಪಟೇಲ್ ಈ ಹೊತ್ತಿನಲ್ಲಿ ಮೂರು ವಿಕೆಟ್ ಗಳಿಸಿದರು. ಇದರಿಂದಾಗಿ ಮುಂಬೈ ತಂಡವು ದ್ವಿಶತಕದ ಗಡಿ ದಾಟಲಾಗಲಿಲ್ಲ. 

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 192 (ರೋಹಿತ್ ಶರ್ಮಾ 36, ಸೂರ್ಯಕುಮಾರ್ ಯಾದವ್ 78, ತಿಲಕ್ ವರ್ಮಾ ಔಟಾಗದೆ 34, ಟಿಮ್ ಡೇವಿಡ್ 14, ಹರ್ಷಲ್ ಪಟೇಲ್ 31ಕ್ಕೆ3, ಸ್ಯಾಮ್ ಕರನ್ 41ಕ್ಕೆ2, ಕಗಿಸೊ ರಬಾಡ 42ಕ್ಕೆ1)

ಪಂಜಾಬ್‌ ಕಿಂಗ್ಸ್‌: 19.1 ಓವರ್‌ಗಳಲ್ಲಿ 183 (ಶಶಾಂಕ್‌ ಸಿಂಗ್‌ 41, ಅಶುತೋಷ್‌ 61, ಹರಪ್ರೀತ್‌ ಬ್ರಾರ್‌ 21; ಜೆರಾಲ್ಡ್ ಕೋಟ್ಜಿ 32ಕ್ಕೆ 3, ಜಸ್‌ಪ್ರೀತ್‌ ಬೂಮ್ರಾ 21ಕ್ಕೆ 3, ಆಕಾಶ್ ಮಧ್ವಲ್ 46ಕ್ಕೆ 1, ಶ್ರೇಯಸ್ ಗೋಪಾಲ್ 26ಕ್ಕೆ 1, ಹಾರ್ದಿಕ್‌ ಪಾಂಡ್ಯ 33ಕ್ಕೆ 1). ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 9 ರನ್‌ಗಳ ಜಯ

Mohali: Mumbai Indians batter Tilak Verma

Mohali: Mumbai Indians batter Tilak Verma

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT