ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರವಾರದ ನಾಮಫಲಕದಲ್ಲಿ ಸಿಮೀತವಾದ ಆರೋಗ್ಯ ಸೇವೆ

ತಾಲ್ಲೂಕು ಕೇಂದ್ರವಾಗಿದ್ದರೂ ಆಸ್ಪತ್ರೆಗೆ ತಜ್ಞ ವೈದ್ಯರ ನಿಯೋಜನೆಯಾಗಿಲ್ಲ
Last Updated 12 ಜುಲೈ 2018, 10:20 IST
ಅಕ್ಷರ ಗಾತ್ರ

ಸಿರವಾರ: ನೂತನ ಸಿರವಾರ ತಾಲ್ಲೂಕು ಕೇಂದ್ರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಪ್ರಭಾರ ವಹಿಸಿರುವ ಅಧಿಕಾರಿಗಳಿದ್ದಾರೆ. ಆದರೆ, ತಾಲ್ಲೂಕು ಆಸ್ಪತ್ರೆಯಲ್ಲಿ ಮಾತ್ರ ತಜ್ಞ ವೈದ್ಯರ ನಿಯೋಜನೆ ಅಥವಾ ನೇಮಕವಾಗಿಲ್ಲ. ಆರೋಗ್ಯ ಸೇವೆಯು ಬರೀ ನಾಮಫಲಕದಲ್ಲಿ ಕಾಣುತ್ತಿದೆ!

ತಾಲ್ಲೂಕು ವ್ಯಾಪ್ತಿಯ ಕವಿತಾಳದ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ. ಸಿರವಾರ, ಕಲ್ಲೂರು, ಬಲ್ಲಟಗಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ 23 ಉಪ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಈ ನಾಲ್ಕು ಆರೋಗ್ಯ ಕೇಂದ್ರಗಳಲ್ಲಿ 11 ತಜ್ಞ ವೈದ್ಯರ ಮಂಜೂರಾತಿ ಇದ್ದರೂ ಯಾವೊಂದು ಕೇಂದ್ರದಲ್ಲಿ ಕಾರ್ಯನಿರತ ವೈದ್ಯರಿಲ್ಲ. ಆಯುಷ್ ವೈದರು ಚಿಕಿತ್ಸೆ ನೀಡುವ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಲ್ಲೂಕು ವೈದ್ಯಾಧಿಕಾರಿಗಾಗಿ ಹಳೆಯ ಕಟ್ಡಕ್ಕೆ ಬಣ್ಣ ಬಳೆಯಲಾಗಿದ್ದು, ಎರಡು ದಿನಗಳಿಗೊಮ್ಮೆ ಬರುವ ಪ್ರಭಾರಿ ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಕವಿತಾಳ ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆ ಸಾಮರ್ಥ್ಯವಿದೆ. ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಮತ್ತು ಅಳವಳಿಕೆ ತಜ್ಞರು ಸೇರಿ ನಾಲ್ಕು ಹುದ್ದೆಗಳು ಖಾಲಿ ಇವೆ.

ಪ್ರಸ್ತುತ ಆಯುಷ್ ವೈದ್ಯರೊಬ್ಬರು ಎನ್.ಆರ್ ಎಚ್.ಎಂ.ಎಸ್ ಯೋಜನೆ ಅಡಿ ಕಾರ್ಯ ನಿರ್ವಹಿಸುತ್ತಿದ್ದು ಇನ್ನೊಬ್ಬ ಆಯುಷ್ ವೈದ್ಯರನ್ನು ಕುರಕುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎರವಲು ಸೇವೆ ಮೇಲೆ ನಿಯೋಜಿಸಿಕೊಳ್ಳಲಾಗಿದೆ. ದಂತ ವೈದ್ಯ ಇದ್ದಾರೆ. ಪ್ರತಿನಿತ್ಯ 200 ಹೊರ ರೋಗಿಗಳು ನೋಂದಣಿ ಮಾಡಿಕೊಳ್ಳುತ್ತಾರೆ. ಸಂತೆಯ ದಿನದಂದು ಸೋಮವಾರ ಮತ್ತು ಬುಧವಾರ 300 ಹೊರ ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ.

ಮಾಸಿಕ ಸರಾಸರಿ ಮೂರು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಸಿಂಧನೂರಿನಿಂದ ವೈದ್ಯರು ಬರುತ್ತಾರೆ. ತಿಂಗಳಿಗೆ ಒಂದು ಬಾರಿ ನಡೆಯುವ ಅಪೌಷ್ಟಿಕ ಮಕ್ಕಳ ತಪಾಸಣಾ ಶಿಬಿರಕ್ಕಾಗಿ ಮಾನ್ವಿಯಿಂದ ಬರುವ ವೈದ್ಯರನ್ನು ಅವಲಂಬಿಸಲಾಗಿದೆ.

ತಾಲ್ಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಗ್ರೂಪ್ ಡಿ ಹುದ್ದೆಗಳು ಮಂಜೂರಾತಿ ಇರುವುದು 17 ಇದರಲ್ಲಿ 10 ಜನ ಇದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಮುಖವಾಗಿರುವ ಫಾರ್ಮಸಿಸ್ಟ್ (ಔಷಧ ವಿತರಕರು) ಎರಡೂ ಹುದ್ದೆಗಳು ಖಾಲಿ ಇರುವುದು ಔಷಧ ವಿತರಣೆಗೆ ತೊಂದರೆ ಅನುಭವಿಸುವಂತಾಗಿದೆ.

ಇನ್ನುಳಿದ ಎಲ್ಲಾ ಕೇಂದ್ರಗಳ ಎಲ್ಲಾ ವಿಭಾಗಳಲ್ಲೂ ಮಂಜೂರಾತಿ ಹುದ್ದೆಗಿಂದ 31 ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ವೆಚ್ಚದಲ್ಲಿ ಸ್ಥಾಪಿಸಿದ ಕ್ಷ ಕಿರಣ ಯಂತ್ರ ಕಳೆದ ಆರು ತಿಂಗಳಿಂದ ಸ್ಥಗಿತವಾಗಿದೆ. ಡೆಂಟಲ್ ಡಾಕ್ಟರ್ ಇದ್ದರೂ ಅಗತ್ಯ ಉಕರಣಗಳು ಇಲ್ಲದ ಕಾರಣ ಸಣ್ಣ ಪುಟ್ಟ ಚಿಕಿತ್ಸೆ ಹೊರತು ಪಡಿಸಿ ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಗೆ ಅಗತ್ಯ ಸೌಲಭ್ಯಗಳಿಲ್ಲದೆ ದಿನಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ.

ಹೆಚ್ಚಿದ ರೋಗಿಗಳ ಸಂಖ್ಯೆ: ತಾಲ್ಲೂಕು ಕೇಂದ್ರ ಘೋಣೆಯಾದ ನಂತರ ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, 100 ರಷ್ಟಿದ್ದ ರೋಗಿಗಳ ಸಂಖ್ಯೆಯು ಏಕಾಏಕಿ 130 ಕ್ಕೆ ಏರಿಕೆಯಾಗಿದೆ. ಸ್ಥಳದ ಅಭಾವದಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿದ್ದು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಪಟ್ಟಣಕ್ಕೆ ತಾಲ್ಲೂಕು ಆರೋಗ್ಯ ಕೇಂದ್ರದ ಅಗತ್ಯವಿದೆ. ತಾಲ್ಲೂಕು ಕೇಂದ್ರದಲ್ಲಿ 100 ಹಾಸಿಗೆ ಸೌಲಭ್ಯವಿರುವ ಆಸ್ಪತ್ರೆ ಸ್ಥಾಪಿಸುವುದು ತುರ್ತು ಅಗತ್ಯವಿದೆ. ಹೆರಿಗೆ ಹಾಗೂ ಇತರೆ ಕಾಯಿಲೆಯ ಚಿಕಿತ್ಸೆಗಾಗಿ ಜನರು ವೆಚ್ಚ ಮಾಡಿಕೊಂಡು ಬೇರೆ ತಾಲ್ಲೂಕು ಕೇಂದ್ರಗಳಿಗೆ ಹೋಗುವುದು ತಪ್ಪುತ್ತದೆ.
*
ನೂತನ ತಾಲ್ಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದು ಶೀಘ್ರದಲ್ಲಿಯೆ ಭರ್ತಿ ಮಾಡಲಿದ್ದಾರೆ.
ಚಂದ್ರಶೇಖರಯ್ಯ, ಪ್ರಭಾರಿ ತಾಲ್ಲೂಕು ವೈದ್ಯಾಧಿಕಾರಿ
*
ತಾಲ್ಲೂಕು ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರ ತಾಲ್ಲೂಕು ಆರೋಗ್ಯ ಕೇಂದ್ರವನ್ನು ಮಂಜೂರು ಮಾಡುವ ಅಗತ್ಯವಿದೆ. ಸಮುದಾಯ ಆರೋಗ್ಯ ಕೇಂದ್ರವೂ ಇರಬೇಕು.
ನಾಗರಾಜ ಸಿರವಾರ
*
ಆಯುಷ್ ವೈದ್ಯರಿಂದ ತಕ್ಕ ಮಟ್ಟಿನ ಚಿಕಿತ್ಸೆ ದೊರೆಯುತ್ತಿದ್ದು, ಹೆಚ್ಚಿನ ಕೆಲ ಚಿಕಿತ್ಸೆಗಾಗಿ ಬೇರೆಡೆ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಇದೆ. ಹೆಚ್ಚಿನ ಚಿಕಿತ್ಸೆ ಬೇಕಾದವರು ಪರದಾಡ ಬೇಕಾಗುತ್ತದೆ.
ಅಮರೇಶ ಗಡ್ಲ, ಸಿರವಾರ
*
ಕವಿತಾಳದ ಸಮುದಾಯ ಆರೋಗ್ಯ ಕೇಂದ್ರವು ಮೇಲ್ದರ್ಜೆಗೆ ಏರಿದರೂ ವೈದ್ಯರ ನೇಮಕವಾಗಿಲ್ಲ. ಎಂಬಿಬಿಎಸ್‌ ವೈದ್ಯರು ಇಲ್ಲದ ಕಾರಣ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಶಿವಕುಮಾರ ಮ್ಯಾಗಳಮನಿ, ಕವಿತಾಳ
*
ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸಿ, ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು. 24/7 ಚಿಕಿತ್ಸೆ ಸೌಲಭ್ಯ ನೀಡುವ ಫಲಕ ಹಾಕಿದ್ದರೂ ತುರ್ತು ಸಂದರ್ಭಗಳಲ್ಲಿ ವೈದ್ಯರಿಲ್ಲದೆ ತೊಂದರೆ ಆಗುತ್ತದೆ.
ಲಿಂಗರಾಜ ಕಂದಗಲ್, ಕವಿತಾಳ
*
ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ನೂತನ ತಾಲ್ಲೂಕು ಕೇಂದ್ರಕ್ಕೆ ಶಾಸಕರು, ಸಂಸದರು ಸೇರಿದಂತೆ ರಾಜಕೀಯ ಮುಖಂಡರು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.
–ಕೆ.ರಾಘವೇಂದ್ರ, ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT