ಗುರುವಾರ , ಜೂನ್ 24, 2021
21 °C
ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ, ವ್ಯಾಪಾರ ಮಂಕು

ಭೀತಿ ಇದ್ದರೂ ಯುವಜನತೆ ಹೋಳಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೊರೊನಾ ವೈರಸ್‌ ಡಿಸೀಜ್‌ (ಕೋವಿಡ್‌–19) ಭೀತಿ ಇದ್ದರೂ ಯುವಕ, ಯುವತಿಯರು ಎಲ್ಲೆಡೆಯಲ್ಲೂ ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆಯ ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಂಭ್ರಮ ಆಚರಿಸಿದರು.

ವೈರಸ್‌ ಬಾರದಂತೆ ಮುನ್ನಚ್ಚರಿಕೆ ಕ್ರಮಗಳ ಮೊರೆ ಹೋಗಿರುವ ಬಹುತೇಕ ಹಿರಿಯರು, ಮಹಿಳೆಯರು ಎಂದಿನಂತೆ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಹಿಂದೂ ಸಂಪ್ರದಾಯ ಪಾಲನೆ ಬಿಡಬಾರದು ಎನ್ನುವುದಕ್ಕಾಗಿ ಕೆಲವು ಬಡಾವಣೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಸಾಂಕೇತಿಕವಾಗಿ ಕೆಲಕಾಲ ಮಾತ್ರ ಪರಸ್ಪರ ಬಣ್ಣ ಎರಚಿಕೊಂಡು ಸಂತೋಷ ಪಟ್ಟರು. ಹಬ್ಬದ ಸಂಭ್ರಮ, ಸಡಗರವನ್ನು ನಿರ್ಭೀತಿಯಿಂದ ಆಚರಿಸದೆ ಇರುವುದಕ್ಕೆ ಬಹಳಷ್ಟು ಜನರಲ್ಲಿ ಅಸಮಾಧಾನ ಮನೆಮಾಡಿತ್ತು. ಎಲ್ಲೆಡೆಯಲ್ಲೂ ಈ ಬಗ್ಗೆ ಪರಸ್ಪರ ಚರ್ಚಿಸುತ್ತಿರುವುದು ಕಂಡುಬಂತು.

ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಬಣ್ಣದಲ್ಲಿ ಮಿಂದೆದ್ದು ಹೋಳಿ ಹುಣ್ಣಿಮೆ ಆಚರಿಸುವುದು ಪ್ರತಿವರ್ಷ ಕಂಡುಬರುತ್ತಿತ್ತು. ಈ ಸಲ ಬೆಳಿಗ್ಗೆ 11 ಗಂಟೆ ನಂತರ ಬಣ್ಣದಾಟ ಇರಲಿಲ್ಲ. ಪ್ರತಿವರ್ಷ ಸಂಘ–ಸಂಸ್ಥೆಗಳು ಕುಟುಂಬದ ಸದಸ್ಯರೆಲ್ಲರೂ ಪಾಲ್ಗೊಳ್ಳಲು ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದವು. ಈ ಸಲ ಒಂದೇ ಒಂದು ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಖಾಸಗಿಯಾಗಿ ಧ್ವನಿವರ್ಧಕ ಅಳವಡಿಸಿಕೊಂಡು ಕೆಲವು ಕಡೆಗಳಲ್ಲಿ ಯುವಕರು ನೃತ್ಯ ಮಾಡುತ್ತಿರುವುದು ಕಂಡುಬಂತು.

ಗಡಿಗೆ ಒಡೆಯುವ ಸ್ಪರ್ಧೆ

ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿವರ್ಷದಂತೆ ಗಡಿಗೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಉಪ್ಪಾರವಾಡಿಯಲ್ಲಿ, ಭಂಗಿ ಕುಂಟ, ಕಿಲ್ಲೇಮಠ ಬಡಾವಣೆ ಸ್ಪರ್ಧೆಗಳು ನಡೆದವು. ಬಗೆಬಗೆಯ ಬಣ್ಣದಲ್ಲಿ ಮಿಂದಿದ್ದ ಯುವಜನರು ಗಡಿಗೆ ಒಡೆಯಲು ನಡೆಸಿದ ಪೈಪೋಟಿ ವಿಶೇಷವಾಗಿತ್ತು.

ಕುಸಿದ ವ್ಯಾಪಾರ

ಈ ವರ್ಷ ಬಣ್ಣದ ಪೊಟ್ಟಣ ಮಾರಾಟದ ಮಳಿಗೆಗಳು ವಿರಳವಾಗಿದ್ದವು. ವೈರಸ್‌ ಕಾರಣದಿಂದ ವ್ಯಾಪಾರ ಇರುವುದಿಲ್ಲ ಎನ್ನುವ ಪೂರ್ವಾಲೋಚನೆಯಿಂದ ಬಹುತೇಕ ವ್ಯಾಪಾರಿಗಳು ಪೊಟ್ಟಣಗಳನ್ನು ತಂದುಕೊಂಡಿರಲಿಲ್ಲ. ‘ಪ್ರತಿವರ್ಷ ಖರೀದಿಸುವಷ್ಟು ಬಣ್ಣವನ್ನು ಜನರು ಖರೀದಿ ಮಾಡಿಲ್ಲ. ಒಣಬಣ್ಣದ ಪೊಟ್ಟಣಗಳನ್ನು ಹೆಚ್ಚಾಗಿ ಕೇಳುತ್ತಿದ್ದಾರೆ. ನೀರಿನಲ್ಲಿ ಹಾಕುವ ಬಣ್ಣಗಳಿಗೆ ಹೆಚ್ಚು ಬೇಡಿಕೆಯಿಲ್ಲ. ಕೋವಿಡ್‌ ವೈರಸ್‌ಗೆ ಎಲ್ಲರೂ ಹೆದರಿದ್ದಾರೆ’ ಎಂದು ಬಣ್ಣದ ವ್ಯಾಪಾರಿ ಶ್ರೀನಿವಾಸ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು