ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಲೋಕಸಭಾ: ಬಿಸಿಲೂರಲ್ಲಿ ಒಳಗಿನ, ಹೊರಗಿನವರ ಬಿಸಿ ಚರ್ಚೆ

ಅಭಿವೃದ್ಧಿಯ ವಿಶ್ವಾಸ: ಹೊರಗಿನ ನಾಲ್ವರನ್ನು ಗೆಲ್ಲಿಸಿದ್ದ ಮತದಾರರು
Published 4 ಮೇ 2024, 8:46 IST
Last Updated 4 ಮೇ 2024, 8:46 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಎಸ್‌.ಟಿ.ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಎಂಟು ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳದ್ದೇ ಚರ್ಚೆ ನಡೆದಿದೆ. ಇಬ್ಬರೂ ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದರೂ ಸ್ಥಳೀಯ ಅಭ್ಯರ್ಥಿ ಹಾಗೂ ಹೊರಗಿನ ಅಭ್ಯರ್ಥಿ ಎನ್ನುವ ಚರ್ಚೆ ಜಿಲ್ಲೆಯಲ್ಲಿ ಜೋರಾಗಿಯೇ ನಡೆದಿದೆ.

ಬಿಜೆಪಿಯವರು ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಿದರೂ ರಾಯಚೂರು ಕ್ಷೇತ್ರದಲ್ಲಿ ಮಾತ್ರ ಹೊರಗಿನ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಚಾರ ಸಭೆಗಳಲ್ಲೂ ಈ ವಿಷಯವನ್ನೇ ಪ್ರಸ್ತಾಪಿಸುತ್ತಿದ್ದಾರೆ.

ರಾಯಚೂರು ಕ್ಷೇತ್ರಕ್ಕೆ 17 ಬಾರಿ ಚುನಾವಣೆ ನಡೆದರೂ ಹೊರಗಿನವರೇ ನಾಲ್ಕು ಬಾರಿ ಚುನಾಯಿತರಾಗಿದ್ದಾರೆ. 13 ಬಾರಿ ಒಳಗಿನವರೇ ಆಯ್ಕೆಯಾದರೂ ಜಿಲ್ಲೆಯ ಚಿತ್ರಣ ಬದಲಾಗಿಲ್ಲ. ನಾಲ್ಕು ಬಾರಿ ಆಯ್ಕೆಯಾದವರೂ ಜಿಲ್ಲೆಯ ಅಭಿವೃದ್ಧಿಗೆ ಆಸಕ್ತಿ ತೋರಿಸಿಲ್ಲ. ರಾಜಕಾರಣಿಗಳು ಮತದಾರರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಪುರುಷರಗಿಂತಲೂ ಅಧಿಕ ಇರುವ ಕಾರಣ ರೈತ ಮಹಿಳೆಯೊಬ್ಬರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ರಾಷ್ಟ್ರೀಯ ಪಕ್ಷಗಳು ಮಾತ್ರ ಮಹಿಳೆಗೆ ಟಿಕೆಟ್‌ ಕೊಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ ಒಂದು ನಿದರ್ಶನವೂ ಕಾಣಸಿಗುವುದಿಲ್ಲ.

ಒಳಗಿನವರ ವಿರುದ್ಧ ಅಸಮಾಧಾನದ ಅಲೆ ಇದೆ. ಒಳಗಿನವರಿಗೆ ಒಳಗಿನಿಂದ ಒಳೆಟು ಕೊಡಲು ಸ್ವಪಕ್ಷೀಯರೇ ಸಿದ್ಥತೆ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಇದೇ ಕಾರಣಕ್ಕೆ ರಾಷ್ಟ್ರೀಯ ನಾಯಕರು ಜಿಲ್ಲೆಯತ್ತ ಮುಖ ಮಾಡಿಲ್ಲ. ಹೊರಗಿನವರೇ ಇರಲಿ, ಸ್ಥಳೀಯರೇ ಇರಲಿ ಸಂವಿಧಾನ ಎಲ್ಲರಿಗೂ ಸ್ಪರ್ಧಿಸುವ ಅವಕಾಶ ನೀಡಿರುವುದರಿಂದ ಮತದಾರರು ಮೇ 7ರಂದು ತಕ್ಕ ಉತ್ತರ ಕೊಡಲಿದ್ದಾರೆ.

1957ರಲ್ಲಿ ಕಾಂಗ್ರೆಸ್‌ನ ಹೈದರಾಬಾದ್ ಮೂಲದ ಜಿ.ಎಸ್.ಮೇಲುಕೋಟೆ 18,020 ಮತಗಳ ಅಂತರದಿಂದ ಒಳಗಿನ ಅಭ್ಯರ್ಥಿಯನ್ನು ಸೋಲಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನ ಕಲಬುರಗಿಯ ಜಗನ್ನಾಥರಾವ್ ಚಂಡ್ರಿಕಿ 15,325 ಮತಗಳ ಅಂತರದಿಂದ, 1986ರಲ್ಲಿ ಬಿ.ವಿ.ದೇಸಾಯಿ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಡೂರು ರಾಜಮನೆತನದ ಎಂ.ವೈ.ಘೋರ್ಪಡೆ 5,679 ಹಾಗೂ 2009ರಲ್ಲಿ ಬಿಜೆಪಿಯ ಬಳ್ಳಾರಿಯ ಎಸ್‌.ಫಕೀರಪ್ಪ ಅವರು ತಮ್ಮ ಪ್ರತಿಸ್ಪರ್ಧಿಯನ್ನು 30,609 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಕ್ಷೇತ್ರ ಎಸ್ಟಿಗೆ ಮೀಸಲಾಗುವ ಮುಂಚೆಯೂ ಕ್ಷೇತ್ರದಲ್ಲಿ ನಾಯಕ ಸಮುದಾಯದವರೇ ಹೆಚ್ಚು ಬಾರಿ ಗೆದ್ದು ತೋರಿಸಿದ್ದಾರೆ. ಇದೀಗ ಒಂದೇ ಸಮುದಾಯದವರೇ ಎದುರು ಬದರು ಆಗಿದ್ದಾರೆ.

ಕಾಂಗ್ರೆಸ್ ಬೆಂಗಳೂರು ಮೂಲದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ ಅವರಿಗೆ ಟಿಕೆಟ್‌ ಕೊಟ್ಟು ಚುನಾವಣಾ ಕಣಕ್ಕೆ ಇಳಿಸಿದೆ. ಬಿಜೆಪಿ ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾದ ರಾಜ ಮನೆತನದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.

‘ಹೊರ ಜಿಲ್ಲೆಯ ಅಭ್ಯರ್ಥಿ ಗೆದ್ದ ನಂತರ ಕ್ಷೇತ್ರದಲ್ಲಿ ಇರುವುದಿಲ್ಲ. ನಾನು ಸ್ಥಳೀಯ ಅಭ್ಯರ್ಥಿ ಜನರಿಗೆ ಸುಲಭವಾಗಿ ಕೈಗೆ ಸಿಗಲಿದ್ದೇನೆ. ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ನನ್ನನ್ನು ಗೆಲ್ಲಿಸಬೇಕು’ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.

‘ಸ್ಥಳೀಯ ಆಕಾಂಕ್ಷಿಗಳಿದ್ದರೂ ಜಿಲ್ಲೆಯವರಿಗೆ ಅನ್ಯಾಯ ಮಾಡಿ ಹೊರಗಿನವರಿಗೆ ಟಿಕೆಟ್‌ ಕೊಡಲಾಗಿದೆ’ ಎಂದು ತಿಳಿಸಿದರು.

‘ಚುನಾವಣೆಯಲ್ಲಿ ಒಳಗಿನವರು, ಹೊರಗಿನವರು ಮುಖ್ಯವಾಗಬಾರದು. ಸಂಸತ್ತಿನಲ್ಲಿ ಕ್ಷೇತ್ರದ ಕುರಿತು ಎಷ್ಟು ಬಾರಿ ಮಾತನಾಡಿದ್ದಾರೆ. ಏಮ್ಸ್‌ ಸೇರಿ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಮಾಡುತ್ತಾರೆ. ಚುನಾಯಿತರು ಮಾಡಿರುವ ಗುರುತರವಾದ ಕಾಮಗಾರಿಗಳು ಯಾವುವು ಎನ್ನುವುದು ಮುಖ್ಯ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಪ್ರತಿಕ್ರಿಯಿಸಿದರು.

‘ರಾಜ ಮನೆತನದವರು, ಪಾಳೆಗಾರರೇ ಅಧಿಕಾರದಲ್ಲಿ ಮುಂದುವರಿಯಬೇಕೆಂದಿಲ್ಲ. ಯಾವುದೇ ವ್ಯಕ್ತಿ, ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು. ಅಭ್ಯರ್ಥಿ ಗುರಿ ಮಾತ್ರ ಅಭಿವೃದ್ಧಿ ಆಗಿರಬೇಕು’ ಎಂದು ಹೇಳಿದರು.

ಜಿ.ಕುಮಾರ ನಾಯಕ
ಜಿ.ಕುಮಾರ ನಾಯಕ
ರಾಜಾ ಅಮರೇಶ್ವರ ನಾಯಕ
ರಾಜಾ ಅಮರೇಶ್ವರ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT