ಮಂಗಳವಾರ, ಸೆಪ್ಟೆಂಬರ್ 21, 2021
21 °C

ದಿನಸಿ ಕಿಟ್ ಖರೀದಿಯಲ್ಲಿ ಅಕ್ರಮ: ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ದಿನಸಿ ಕಿಟ್‌, ಟೂಲ್ ಕಿಟ್, ಸೇಫ್ಟಿ ಕಿಟ್ ಮೊದಲಾದ ಸಾಮಗ್ರಿಗಳ ಖರೀದಿಯಲ್ಲಿ ನಡೆದ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು‘ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ತಾಲ್ಲೂಕು ಘಟಕ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿತು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೋವಿಡ್ ಪರಿಹಾರದ ರೂಪದಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಿದ ಕಿಟ್‍ಗಳ ವಿತರಣೆಗೆ ಶಾಸಕರಿಗೆ ಜವಾಬ್ದಾರಿ ನೀಡಲಾಗಿತ್ತು. ಕೆಲವು ಕಡೆ ಶಾಸಕರು ಕೇವಲ ಬಿಜೆಪಿ ಕಾರ್ಯಕರ್ತರಿಗೆ ನೀತಿದ್ದಾರೆ. ಇನ್ನೂ ಕೆಲವು ಕಡೆ ಶಾಸಕರು ತಮ್ಮ ಫೋಟೋ ಹಾಗೂ ಬಿಜೆಪಿ ಚಿಹ್ನೆ ಹಾಕಿ ಕಿಟ್ ವಿತರಿಸಿದ್ದಾರೆ. ಕಿಟ್‍ಗಳನ್ನು ಶಾಸಕರ ಕೈಗೆ ಕೊಡುವ ಅವಶ್ಯಕತೆ ಇರಲಿಲ್ಲ. ಕಿಟ್‍ಗಳ ಖರೀದಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ತಾಲ್ಲೂಕು ಘಟಕದ ಅಧ್ಯಕ್ಷ ಶೇಕ್ಷಾಖಾದ್ರಿ ಆಗ್ರಹಿಸಿದರು.

2021-22ನೇ ಸಾಲಿನಲ್ಲಿ ₹ 2033 ಕೋಟಿ ಹಣ ವಿವಿಧ ರೀತಿಯಲ್ಲಿ ಖರ್ಚು ಮಾಡಲು ತೀರ್ಮಾನಿಸಿದೆ. ಇದು ಕೇಂದ್ರ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶನದ ವಿರುದ್ಧವಾಗಿದೆ. ಈ ರೀತಿ ಮಂಡಳಿಯ ಹಣ ಖರ್ಚು ಮಾಡುವುದು ಖಂಡನೀಯ. ಮಂಡಳಿಯ ನಿರ್ದೇಶನ ಮೀರಿ ಯಾವುದೇ ರೀತಿಯ ಹಣ ಖರ್ಚು ಮಾಡಬಾರದು. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿರಸ್ತೇದಾರ್ ಅಂಬಾದಾಸ್ ಮನವಿ ಪತ್ರ ಸ್ವೀಕರಿಸಿದರು.

ಕಾರ್ಯದರ್ಶಿ ಅನ್ವರಪಾಷಾ ಮೇಸ್ತ್ರಿ, ವಿಶ್ವೇಶ್ವರಯ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮುಕ್ತಾರ್ ಅಹ್ಮದ್, ಕಾರ್ಯದರ್ಶಿ ಸಾದಿಕ್ ಅನ್ಸಾರಿ, ಪ್ರಗತಿಪರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಹನುಮೇಶ ಭಂಗಿ, ಕಾರ್ಯದರ್ಶಿ ದೇವಪ್ಪ ಶಹಾಪುರ, ಸದಸ್ಯರಾದ ಚಾಂದ್‍ಪಾಷಾ, ಮಾರುತಿ ಜವಳಗೇರಾ, ಅನ್ವರ್‍ಬಾಷಾ ಮೇಸ್ತ್ರಿ, ಮುನಿಸ್ವಾಮಿ, ಗೋವಿಂದರಾಜ್, ಚಾಂದ್ ಜವಳಗೇರಾ, ಶ್ಯಾಮಸುಂದರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು