ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಜಮೀನು ಒತ್ತುವರಿ ಸ್ಥಳ ಪರಿಶೀಲನೆ

ಸರ್ವೆಗೆ ಮುಂಚೆಯೇ ಆರ್.ಬಿ. ಶುಗರ್ಸ್‌ಗೆ ಒತ್ತುವರಿ ಆರೋಪದಿಂದ ಕ್ಲೀನ್‌ಚಿಟ್
Published : 21 ಸೆಪ್ಟೆಂಬರ್ 2024, 15:50 IST
Last Updated : 21 ಸೆಪ್ಟೆಂಬರ್ 2024, 15:50 IST
ಫಾಲೋ ಮಾಡಿ
Comments

ಲಿಂಗಸುಗೂರು: ತಾಲ್ಲೂಕಿನ ಸುಣಕಲ್ಲ ಗ್ರಾಮದ ಬಳಿ ಸಕ್ಕರೆ ಕಾರ್ಖಾನೆ ನಿರ್ಮಾಣ ಸ್ಥಳಕ್ಕೆ ಶನಿವಾರ ತಹಶೀಲ್ದಾರ್ ಶಂಶಾಲಂ ನಾಗಡದಿನ್ನಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆರ್.ಬಿ.ಶುಗರ್ಸ್‌ ಕಂಪನಿ ಅರಣ್ಯ ಮತ್ತು ಕಂದಾಯ ಇಲಾಖೆ ಸೇರಿದಂತೆ ಖಾಸಗಿ ವ್ಯಕ್ತಿಗಳ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡದೆ ಕಲ್ಲುಗುಡ್ಡ ಸ್ವಚ್ಛಗೊಳಿಸಿ ಸಮತಟ್ಟು ಕಾರ್ಯ ನಡೆಸಿದ ಬಗ್ಗೆ ಕರ್ನಾಟಕ ರೈತ ಸಂಘ ದೂರು ನೀಡಿತ್ತು.

ಚಿಕ್ಕ ಉಪ್ಪೇರಿ ಗ್ರಾಮದ ಸ.ನಂ 62 ಭಾಗಶಃ ಒತ್ತುವರಿ ಮಾಡಿ ಇತರೆ ಜಮೀನಿನಲ್ಲಿನ ಕಲ್ಲು ಮಣ್ಣು ತಂದು ಹಾಕಿ ಬೃಹತ್‌ ಗುಡ್ಡ (ಕಲ್ಲುಗುಡ್ಡ) ನಿರ್ಮಾಣ ಮಾಡಿರುವುದು ಒತ್ತುವರಿ ನಡೆದಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ. 

ಆರ್.ಬಿ.ಶುಗರ್ಸ್‌ 68 ಎಕರೆ ಜಮೀನು ಖರೀದಿ ಮಾಡಿದೆ. ಈ ಪೈಕಿ 39 ಎಕರೆ ಕೃಷಿಯೇತರ ಜಮೀನಾಗಿ ಪರಿವರ್ತಿಸಲಾಗಿದೆ. ಆದರೆ, ನೂರಾರು ಎಕರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಉಲ್ಲಂಘಿಸಿ ಕಲ್ಲು ಮಣ್ಣು ತೆರವು ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

ತಹಶೀಲ್ದಾರ್‌ ಆದೇಶದ ಮೇರೆಗೆ ಸರ್ವೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿವೆ. ಆದರೆ, ರೈತರ ಆರೋಪದ ಜಮೀನುಗಳ ಸರ್ವೆ ಮಾಡುವ ಮುಂಚೆಯೇ ಕಂದಾಯ ಇಲಾಖೆ ಆರ್.ಬಿ. ಶುಗರ್ಸ್‌ ಕಂಪನಿ ಒತ್ತುವರಿ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಿರುವುದು ಕುತೂಹಲ ಕೆರಳಿಸಿದೆ.

ಅರಣ್ಯ ಇಲಾಖೆ ವಲಯ ಅಧಿಕಾರಿ ಈಗಲೇ ಏನೂ ಹೇಳಲಾಗದು. ನಮ್ಮ ಇಲಾಖೆ ಸರ್ವೆ ನಂತರವೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ. ಚಿಕ್ಕ ಉಪ್ಪೇರಿ ಸ.ನಂ 62 ಒತ್ತುವರಿ ಮತ್ತು ಕೃಷಿಯೇತರ ಜಮೀನಾಗಿ ಪರಿವರ್ತಿಸದೆ ನಡೆದಿರುವ ಕಾಮಗಾರಿ ಬಗ್ಗೆ ಕಂದಾಯ ಇಲಾಖೆ ಜಾಣ ಕುರುಡುತನ ಮೆರೆದಿದೆ ಎಂದು ರೈತರು ದೂರಿದ್ದಾರೆ.

‘ಅರಣ್ಯ ಮತ್ತು ಕಂದಾಯ ಇಲಾಖೆ ಸರ್ವೆ ನಂಬರ್‌ ಆಧರಿಸಿ ದೂರು ನೀಡಿದ್ದೇವೆ. ದೂರಿನಲ್ಲಿನ ಎಲ್ಲ ಸರ್ವೆ ನಂಬರ್ ಸರ್ವೆ ಮಾಡದೆ ಕಂದಾಯ ಇಲಾಖೆ ಕ್ಲೀನ್ ಚಿಟ್ ನೀಡಲು ಮುಂದಾಗಿದೆ. ಶೀಘ್ರದಲ್ಲಿಯೇ ದಾಖಲೆ ಸಮೇತ ಅಹೋರಾತ್ರಿ ಧರಣಿ ನಡೆಸಲಿದ್ದೇವೆ’ ಎಂದು ಕರ್ನಾಟಕ ರೈತ ಸಂಘದ ಹಿರಿಯ ಮುಖಂಡ ಗಂಗಾಧರ ಗುಂತಗೋಳ ತಿಳಿಸಿದ್ದಾರೆ.

ಈ ಕುರಿತು ತಹಶೀಲ್ದಾರ್ ಶಂಶಾಲಂ ನಾಗಡದಿನ್ನಿ ಮಾತನಾಡಿ, ‘ರೈತರ ದೂರು ಆಧರಿಸಿ ಸರ್ವೆ ನಡೆದಿದೆ. ಮೇಲ್ನೋಟಕ್ಕೆ ಒತ್ತುವರಿ ಕಂಡು ಬಂದಿಲ್ಲ. ಅಕ್ಕಪಕ್ಕದ ರೈತರೇ ಆರ್.ಬಿ.ಶುಗರ್ಸ್‌ ಕಂಪನಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದರು.

ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ, ಕಂದಾಯ ನಿರೀಕ್ಷಕ ರಾಮಕೃಷ್ಣ, ಗ್ರಾಮ ಆಡಳಿತಾಧಿಕಾರಿ ಪುಷ್ಪಲತಾ, ಭೂ ಮಾಪಕರು ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT