ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಚಿತ್ರ ತೆರವು; ನ್ಯಾಯಾಧೀಶ ವಿರುದ್ಧ ಎಫ್‌ಐಆರ್ ದಾಖಲಿಸುವವರೆಗೂ ಧರಣಿ

Last Updated 28 ಜನವರಿ 2022, 7:54 IST
ಅಕ್ಷರ ಗಾತ್ರ

ರಾಯಚೂರು: ಗಣರಾಜ್ಯೋತ್ಸವ ದಿನದಂದು ನ್ಯಾಯಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಎಫ್‌ಐಆರ್ ದಾಖಲು ಮಾಡುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ದೂರು ದಾಖಲಿಸಲು ಮೀನಾಮೇಷ ಎಣಿಸುವುದು ಸರಿಯಿಲ್ಲ. ನ್ಯಾಯಾಧೀಶರು ತಪ್ಪು ಮಾಡಿದಾಗ ಕ್ರಮ ಕೈಗೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ. ಧ್ವಜಾರೋಹಣ ಸಂದರ್ಭದಲ್ಲಿ ನ್ಯಾಯಾಧೀಶ ಮಾಡಿದ ತಪ್ಪನ್ನು ಎಲ್ಲರೂ ನೋಡಿದ್ದಾರೆ' ಎಂದು ಎಂ.ವಿರೂಪಾಕ್ಷಿ ತಿಳಿಸಿದರು.

'ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ತೀರ್ಮಾ‌ನ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ' ಎಂದು ತಿಳಿಸಿದರು.

ಹೋರಾಟಗಾರ ಆರ್.ಮಾನಸಯ್ಯ ಮಾತನಾಡಿ, 'ಅಪಾದಿತರ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಕಳುಹಿಸುವುದು ಪೊಲೀಸರ ಕೆಲಸ. ಈ ಕೃತ್ಯದ ಬಗ್ಗೆ ಅಪಾದಿತರು ಮೊಬೈಲ್‌ನಲ್ಲಿ ಕ್ಷಮೆ ಕೂಡಾ ಕೋರಿದ್ದಾರೆ. ತಪ್ಪು ಮಾಡುವುದು ಒಂದು ಕಡೆ, ತಪ್ಪು ಮುಚ್ಚಿಕೊಳ್ಳಲು ಅಧಿಕಾರ ಬಳಸಿಕೊಂಡು ಮಾಧ್ಯಮಗಳಿಗೆ ಸ್ಪಷ್ಟನೆ ಕೂಡಾ ನೀಡಿದ್ದಾರೆ.ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದರಿಂದ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು.ಇದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಮಾಧ್ಯಮಗಳಿಗೆ ನೀಡಿದ ಹೇಳಿಕೆ ಖಂಡನೀಯ. ಕೂಡಲೇ ಅದನ್ನು ವಾಪಸ್ ಪಡೆಯಬೇಕು' ಎಂದು ಹೇಳಿದರು.

'ಉದ್ದೇಶಪೂರ್ವಕವಾಗಿ ಎಫ್‌ಐಆರ್‌ ಮಾಡಲು ವಿಳಂಬ ಮಾಡಲಾಗಿದೆ. ನ್ಯಾಯಾಲಯದಲ್ಲಿ ಗಣೇಶ ಹಾಗೂ ಸರಸ್ವತಿ ಫೋಟೊ ಹಾಕುವುದು ಕೂಡಾ ಕೋರ್ಟ್ ಶಿಷ್ಟಾಚಾರದ ಉಲ್ಲಂಘನೆ ಅಲ್ಲವೆ?ಕೋರ್ಟ್ ಆವರಣದಲ್ಲಿ ನಡೆದಿರುವುದು ಸಂಪೂರ್ಣ ಖಾಸಗಿ ಕೃತ್ಯ. ಒಂದು ವಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

'ನ್ಯಾಯಾಲಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಳವಡಿಸಬೇಕು ಎನ್ನುವ ಸಂಗತಿಯು ಫುಲ್ ಕೋರ್ಟ್‌ನಲ್ಲಿದೆ. ರಾಯಚೂರಿನಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆದಿರುವುದು ನ್ಯಾಯಾಲಯದ ಹೊರಗಡೆ' ಎಂದು ತಿಳಿಸಿದರು.

ರವೀಂದ್ರ ಪಟ್ಟಿ, ಅಂಬಣ್ಣ ಅರೋಲಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT