ಸಿಂಧನೂರು: ನಗರದ ಸತ್ಯಗಾರ್ಡನ್‍ನಲ್ಲಿ ನ.25 ಮತ್ತು 26ರಂದು ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆ ಏರ್ಪಡಿಸಲಾಗಿದ್ದು, ನೇಪಾಳ, ಶ್ರೀಲಂಕಾ, ಭೂತಾನ್ ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಸ್ಪರ್ಧೆಯ ಆಯೋಜಕ ಕಲ್ಯಾಣ ಕುಮಾರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕರಾಟೆಯಿಂದ ಆತ್ಮರಕ್ಷಣೆ ಜೊತೆಗೆ ಆರೋಗ್ಯವೂ ವೃದ್ಧಿಸುತ್ತದೆ. ಪ್ರತಿವರ್ಷ ಸಿಂಧನೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ಏರ್ಪಡಿಸಿಕೊಂಡು ಬರಲಾಗುತ್ತಿದೆ’ ಎಂದರು.
‘ಈ ವರ್ಷ ದೊಡ್ಮನೆ ಟ್ರೋಫಿ ಹೆಸರಿನಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಲಿದ್ದಾರೆ. 12 ರಾಜ್ಯಗಳಿಂದ ಸುಮಾರು 1,500 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸುವರು. ವಿಜೇತರಿಗೆ ಕಪ್ ಹಾಗೂ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು’ ಎಂದು ಹೇಳಿದರು.
ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ವೈಟ್ ಬೆಲ್ಟ್, ಬ್ರೌನ್ ಬೆಲ್ಟ್, ಬ್ಲಾಕ್ ಬೆಲ್ಟ್ ಸೇರಿದಂತೆ ಹಲವು ರೀತಿಯ ಸ್ಪರ್ಧೆಗಳು ಒಳಗೊಂಡಿವೆ. ಎಲ್ಲ ಸ್ಪರ್ಧಾಳುಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು. ಆಸಕ್ತ ಕರಾಟೆ ಸ್ಪರ್ಧಿಗಳು ಹೆಸರು ನೋಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.
ಕರಾಟೆ ಪಟುಗಳಾದ ಶೇಖರ್ ರಾಠೋಡ, ಹುಲಿಗೇಶ, ಹನುಮೇಶ, ಅಪ್ಸಾ, ಪ್ರಜ್ಞಾ, ರಮೇಶ, ಎಂ.ಎಸ್.ಖಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.