ಸಿರವಾರ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ತಾಲ್ಲೂಕಿನ ಹಳ್ಳಿ ಹೊಸೂರು, ಮಾಡಗಿರಿ ಗ್ರಾಮದ ನೂರಾರು ರೈತರ ಬೆಳೆ ವಿಮೆಯ ಪರಿಹಾರದ ಹಣ ಅನ್ಯರ ಖಾತೆಗೆ ಜಮಾ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಇಬ್ಬರನ್ನು ಬುಧವಾರ ಬಂಧಿಸಿದ್ದಾರೆ.
ಸಿಐಡಿಯ ಪಿಎಸ್ಐ ಕಿರಣ ನೇತೃತ್ವದ ಎಂಟು ಜನರ ತಂಡವು ಪ್ರಕರಣದ ಆರೋಪಿಗಳಾದ ಮಾಡಗಿರಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಯ್ಯ, ಕಂಪ್ಯೂಟರ್ ಆಪರೇಟರ್ ಆಗಿದ್ದ ಅಕ್ಷಯ ಕುಮಾರ ಎನ್.ಹೊಸೂರು ಅವರನ್ನು ಬಂಧಿಸಿದೆ. ಮಾನ್ವಿ ತಾಲ್ಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಿ, ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದೆ.
ಸಿರವಾರ ಮತ್ತು ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಎಕರೆ ಪ್ರದೇಶದ ರೈತರ ಬೆಳೆ ವಿಮೆಯ ಪರಿಹಾರದ ಹಣ ಅನ್ಯರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದಕ್ಕೆ ಸಂಬಂಧಿಸಿದಂತೆ ಎಂಟು ತಿಂಗಳ ಹಿಂದೆ ಸಿರವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.