ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ram Mandir | ರಜೆ ಘೋಷಣೆ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು: ರಂಭಾಪುರಿ ಶ್ರೀ

Published 21 ಜನವರಿ 2024, 16:04 IST
Last Updated 21 ಜನವರಿ 2024, 16:04 IST
ಅಕ್ಷರ ಗಾತ್ರ

ರಾಯಚೂರು: ‘ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಪ್ಠಾಪನೆ ಕಾರ್ಯಕ್ರಮ ನಡೆಯುವ ದಿನ ರಜೆ ಘೋಷಣೆ ಮಾಡುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಆದರೆ, ರಜೆ ಘೋಷಣೆ ಮಾಡದಿದ್ದರೆ ಹಿಂದೂ ವಿರೋಧಿ ಎಂಬ ಭಾವನೆ ಜನರಲ್ಲಿ ಮೂಡುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ರಾಯಚೂರಿನಲ್ಲಿ ಸೋಮವಾರಪೇಟೆ ಮಠದ ಪಂಚಲಿಂಗೇಶ್ವರ ದೇವಾಲಯದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಕಲ್ಯಾಣ ಮಂಟಪದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ದೇಶದಲ್ಲಿ ರಾಮಮೂರ್ತಿ ಪ್ರತಿಷ್ಠಾಪಿಸುವ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎನ್ನುವುದು ಬಹುಜನರ ಆಪೇಕ್ಷೆ. ಆದರೆ ಕೆಲ ಪಕ್ಷಗಳ ಧ್ಯೇಯ ಧೋರಣೆ ಬೇರೆಯಾಗಿರುವುದರಿಂದ ರಜೆ ಘೋಷಿಸದಿರಬಹುದು’ ಎಂದು ಹೇಳಿದರು.

‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ನಿರ್ಣಯ ಕೈಗೊಂಡಿಲ್ಲ ಎನ್ನುವುದು ಪ್ರತಿಕೆಗಳ ಮೂಲಕ ಗಮನಕ್ಕೆ ಬಂದಿದೆ. ಎಲ್ಲ ರಾಜ್ಯಗಳಲ್ಲಿ ಸಾರ್ವತ್ರಿಕ ರಜೆ ಕೊಟ್ಟಿರುವ ಕಾರಣ ಕರ್ನಾಟಕ ರಾಜ್ಯದಲ್ಲಿಯೂ ರಜೆ ಘೋಷಣೆ ಮಾಡಿದ್ದರೆ ಜನರ ಭಾವನೆಗೆ ಬೆಲೆ ನೀಡಿದ್ದಾರೆ ಎಂದು ಅರ್ಥೈಸಬಹುದು. ಹಿಂದೂ ವಿರೋಧಿಗಳು ಎನ್ನುವಂತಹ ಭಾವನೆಗೆ ಅಸ್ಪದ ಕೊಡಬಾರದು’ ಎಂದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಬಹುಸಂಖ್ಯಾತ ಹಿಂದೂಗಳ ಆಸೆ ಆಗಿತ್ತು. ಇದಕ್ಕೆ ಸುದೀರ್ಘವಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ಸುಪ್ರೀಂಕೋರ್ಟ್ ಒಂದು ಸ್ಪಷ್ಟವಾದ ನಿರ್ದೇಶನ ನೀಡಿ ತಾರ್ಕಿಕ ಅಂತ್ಯ ಹಾಡಿದೆ. ಅಯೋಧ್ಯೆಯಲ್ಲಿ ರಾಮ ಜನ್ಮ ತಾಳಿದ್ದರಿಂದ ಅಲ್ಲಿ ರಾಮಮಂದಿರ ಇತ್ತು ಎಂಬ ವಾದದಿಂದ ಹಿಂದೂಗಳ ಪರ ತೀರ್ಪು ಬಂದಿದೆ. ಸುಪ್ರಿಂಕೋರ್ಟ್ ಆದೇಶದಿಂದ ಬಹುಸಂಖ್ಯಾತರ ಆಸೆ ಈಡೇರಿದೆ’ ಎಂದು ಹೇಳಿದರು.

‘ಮುಸ್ಲಿಮರು ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ್ದಾರೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ನಿವೇಶನ ನೀಡಿದ್ದು ಭವ್ಯವಾದ ಮಸೀದಿ ನಿರ್ಮಿಸಿಕೊಳ್ಳಬಹುದು. ಎರಡು ಧರ್ಮದವರೂ ಪರಸ್ಪರ ಸಂಘರ್ಷಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದರು.

‘ರಾಮಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಎಲ್ಲಾ ಮಠಾಧೀಶರಿಗೆ ಆಹ್ವಾನ ನೀಡಲಾಗಿದೆ. ಆದರೆ ನಮ್ಮ ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ಭಾಗವಹಿಸಲು ಆಗುವುದಿಲ್ಲ’ ಎಂದು ಹೇಳಿದರು.

‘ಶ್ರೀರಾಮನ ಆದರ್ಶ, ವ್ಯಕ್ತಿತ್ವ ಈ ನಾಡಿನ ಜನ ಸಮುದಾಯಕ್ಕೆ ದಿಕ್ಸೂಚಿಯಾಗಿದೆ. ಮಂದಿರ ಕಾರ್ಯಕ್ರಮ ಯಶ್ವಸಿಯಾಗಲಿ, ಯಾರು ಅದರ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ.  ಪ್ರಧಾನಿ ಮೋದಿ ಅವರ ಮುಂದ್ವಾಳತದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಪ್ರಾಯದ ಬದ್ಧವಾಗಿ ಕಾರ್ಯಕ್ರಮದ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT