ಶುಕ್ರವಾರ, ಮೇ 20, 2022
19 °C
ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಕಾರ್ಯಕ್ರಮ

ವಿವೇಕಿಗಳಾದರೆ ಮಾತ್ರ ಶಿಕ್ಷಣಕ್ಕೆ ಮಹತ್ವ: ಪ್ಯಾಟೆಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಶಿಕ್ಷಣ ಇಲ್ಲದೆ ಪ್ರಜ್ಞೆ ಇಲ್ಲ, ವಿದ್ಯೆ ಇಲ್ಲದೆ ಅಭಿವೃದ್ದಿಯಾಗಲು ಸಾಧ್ಯ ಇಲ್ಲ ಎಂದು ಡಯಾಟ್‌ನ ಉಪನ್ಯಾಸಕ ಎಸ್. ಪ್ಯಾಟೆಪ್ಪ ಹೇಳಿದರು.

ನಗರದ ನವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಏರ್ಪಡಿಸಿದ್ದ ಶ್ರೀ ಚನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿ ಹಾಗೂ ಲಿಂ. ಅಮೀನಪ್ಪ ಗೌಡ ಎಚ್. ಅಗಸಿ ಮುಂದಿನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವರ್ತಮಾನ ಶೈಕ್ಷಣಿಕ ಚಿಂತನೆ’ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದರು.

ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಸ್ಪರ್ಧೆ ಸೃಷ್ಟಿ ಮಾಡಿದೆ. ಅಂಕಗಳನ್ನು ಪಡೆಯುವುದೇ ಸಾಧನೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅಂಕ ಪಡೆದವರೆಲ್ಲ ಸಾಧಕರಾಗುವುದಿಲ್ಲ. ಸಾಧನೆ ಮಾಡಲು ಅಂಕಗಳ ಅವಶ್ಯಕತೆ ಇಲ್ಲ ಎಂದರು.

ಶಿಕ್ಷಣ ಪಡೆದು ಸಂಸ್ಕಾರ ಪಡೆದುಕೊಳ್ಳಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ. ದೇಶದಲ್ಲಿ ಶಿಕ್ಷಣ ಪಡೆದು ವಿದ್ಯಾವಂತರಾದವರು ಇದ್ದರೆ, ವಿದ್ಯಾವಂತರೆಲ್ಲ ವಿವೇಕಿಗಳಲ್ಲ. ಅವಿದ್ಯಾವಂತರೆಲ್ಲ ಅವಿವೇಕಿಗಳಲ್ಲ. ವಿವೇಕಕ್ಕೂ ವಿದೈಗೂ ಸಂಬಂಧ ಇಲ್ಲ, ವಿದ್ಯೆಯಿಂದ ವಿವೇಕ ಬರಬೇಕಾಗಿದೆ ಎಂದು ಹೇಳಿದರು. 

ಒಂದು ದೇಶದ ಅಭಿವೃದ್ದಿ ಆ ದೇಶದ ಶಿಕ್ಷಣ ಮೇಲೆ ನಿಂತಿದೆ. ಯಾವ ದೇಶ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತದೊ ಆ ದೇಶ ಎಲ್ಲಾ ರಂಗದಲ್ಲಿ ಅಭಿವೃದ್ಧಿ ಸಾಧಿಸಿರುವುದು ನಮ್ಮ ಕಣ್ಣ ಮುಂದೆ ಇದೆ. ಅದಕ್ಕೆ ಶಿಕ್ಷಣ ಹೆಚ್ಚು ಮಹತ್ವ ಕೊಟ್ಟರೆ ನಮ್ಮ ದೇಶವೂ ಎಲ್ಲ ರಂಗದಲ್ಲಿ ಅಭಿವೃದ್ಧಿ ಕಾರಣ ಸಾಧ್ಯ ಆಗುತ್ತದೆ. ಆ ನಿಟ್ಟಿನಲ್ಲಿ ಸರಕಾರಗಳು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ದ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ವರ್ತಮಾನ ಶಿಕ್ಷಣ ವ್ಯವಸ್ಥೆಯಿಂದ ಜನರಲ್ಲಿ ವೈಜ್ಞಾನಿಕ ಚಿಂತನೆಗಳು ತುಂಬುವ ಕೆಲಸ ಆಗುತ್ತಿಲ್ಲ. ವೈಚಾರಿಕ ಪ್ರಜ್ಞೆ ಇಲ್ಲ ಶಿಕ್ಷಣ ವ್ಯವಸ್ಥೆ ಆ ದೇಶದ ಅಭಿವೃಧ್ಧಿಗೆ ಮಾರಕ ಎಂದರು.

ವಿಶೇಷ ಅಹ್ವಾನಿತರಾದ ವೈಶಾಲಿ ಪಾಟೀಲ ಮಾತನಾಡಿದರು. ನವೋದಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಉಮಾಕಾಂತ ದೇವರಮನಿ ಉದ್ಘಾಟಿಸಿದರು. ವಕೀಲ ರಾಜಾಶಂಕರ, ರತನ್‌ಲಾಲ ಇದ್ದರು. 

ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕಿ ಪ್ರಿಯಾಮಣಿ ಮ್ಯಾಗಿ ಅವರಿಗೆ ಶ್ರೀ ಚನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿ ನೀಡಲಾಯಿತು.

ಸಹನಾ ಬರೂರ , ರಾಘವೇಂದ್ರ ನಾಯಕ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು .ನವೋದಯ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಧರ್ಮವತಿ ನಿರೂಪಿಸಿದರು. ಉಮಾಶ್ರಿ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ರವುತ ರಾವ್ ಬರೂರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.