ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ಗೆ ಬದುಕು ನೀಡಿದ ಕೃಷಿ

ಎರಡು ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿ, ಉತ್ತಮ ಲಾಭ ಪಡೆದ ರೈತ ದಾವಲಸಾಬ ಉಮಲೂಟಿ
Last Updated 1 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಸಿಂಧನೂರು: ವಿದ್ಯಾವಂತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಹಲವು ಆರೋಪಗಳ ನಡುವೆ ಇಲ್ಲೊಬ್ಬ ಎಂಜಿನಿಯರಿಂಗ್ ಪದವೀಧರರೊಬ್ಬರು ಎಲ್ಲರಿಗೆ ಮಾದರಿಯಾಗಿ ನಿಂತಿದ್ದಾರೆ. ಅವರು ರೇಷ್ಮೆ ಕೃಷಿಯಲ್ಲಿ ಖುಷಿ ಕಾಣುವ ಮೂಲಕ ಉತ್ತಮ ಲಾಭ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಾಲ್ಲೂಕಿನ ಉಮಲೂಟಿ ಗ್ರಾಮದಲ್ಲಿರುವ ದಾವಲಸಾಬ ಮಾದರಿ ರೈತ ಎನಿಸಿದ್ದಾರೆ.

ಈ ಭಾಗದಲ್ಲಿ ರೇಷ್ಮೆ ಕೃಷಿ ಎಂದರೆ ಮಾರು ದೂರ ಹೋಗುವವರು ಹೆಚ್ಚು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಇವರು, ಉದ್ಯೋಗಕ್ಕೆ ಗುಡ್ ಬೈ ಹೇಳಿ, ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಎಂಜಿನಿಯರ್‌ ಆದರೆ ಸಾಕು ಕೈ ತುಂಬಾ ಕಾಸು ಎಂದು ಬಾಯಿ ಬಿಡುವವರು ಇವರನ್ನೊಮ್ಮೆ ನೋಡಬೇಕಿದೆ.

1992 ಅವಧಿಯಲ್ಲಿ ಹುಲಕೋಟಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ದಾವಲಸಾಬ, ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. 2017 ರವರೆಗೆ ತಾವರಗೇರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಸರ್ಕಾರಿ ಹುದ್ದೆಗಳಿಗೂ ನಿರಂತರ ಪ್ರಯತ್ನ ಮಾಡಿ, ನಿರಾಸೆಗೆ ಒಳಗಾಗಿದ್ದಾರೆ. ಕಡಿಮೆ ವೇತನ ಹಾಗೂ ಒತ್ತಡದ ಕಾರಣಕ್ಕೆ ಕೃಷಿಯತ್ತ ಮುಖ ಮಾಡಿದ್ದಾರೆ. ಎರಡು ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿರುವ ದಾವಲಸಾಬ, ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಉಮಲೂಟಿ ಭಾಗದಲ್ಲಿ ತೋಟಗಾರಿಕೆ ಬೆಳೆಗೆ ಪೂರಕವಾದ ನೀರು ಹಾಗೂ ಭೂಮಿ ಇದೆ. ಹೀಗಾಗಿ ಇಲ್ಲಿ ರೇಷ್ಮೆ ಬೆಳೆ ಬೆಳೆಯುವಂತೆ ದಾವಲಸಾಬ ಕುಟುಂಬವನ್ನು ರೇಷ್ಮೆ ಇಲಾಖೆ ಅಧಿಕಾರಿಗಳಾದ ಮರಿಯಪ್ಪ ಬಳಗಾನೂರು, ಶರಣಪ್ಪ ಬಿ ಅವರು ಒತ್ತಾಯಿಸಿದ್ದರು.

ರೇಷ್ಮೆ ಬೆಳೆಯಿಂದಾಗುವ ಲಾಭ, ಸರ್ಕಾರದ ಯೋಜನೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಅಧಿಕಾರಿಗಳ ಸಲಹೆಯಂತೆ ದಾವಲಸಾಬ ಕಾಲೇಜು ಕೆಲಸ ಬಿಟ್ಟು, ಹೊಲಕ್ಕೆ ತೆರಳಿದರು. ಕುಟುಂಬದವರ ಸಹಕಾರದೊಂದಿಗೆ 13 ಎಕರೆ ಭೂಮಿಯ ಪೈಕಿ ಒಂದು ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆದು, ರೇಷ್ಮೆ ಕೃಷಿ ಮಾಡಿದರು.

ರೇಷ್ಮೆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ದಾವಲಸಾಬ, ಬಳಿಕ ರೇಷ್ಮೆ ಗೂಡುಗಳಲ್ಲಿ ಹುಳು ಸಾಕಾಣಿಕೆಗೆ ಮುಂದಾದರು. ಒಂದು ಎಕರೆಯಲ್ಲಿ ಹಿಪ್ಪು ನೇರಳೆ ಬೆಳೆದು, ಹುಳುವಿಗೆ ಆಹಾರ ನೀಡಿದರು. ವರ್ಷದಲ್ಲಿ 6 ಬೆಳೆ ತೆಗೆದು ಕನಿಷ್ಠ ₹ 1.50 ಲಕ್ಷ ಲಾಭಗಳಿಸಿದ್ದಾರೆ. ಹುಳು ಸಾಕಾಣಿಕೆ ಬಗ್ಗೆ ಪ್ರಮುಖರ ಸಲಹೆ ಪಡೆದಿರುವುದು ಲಾಭಕ್ಕೆ ಪ್ರಮುಖ ಕಾರಣ ಎನಿಸಿದೆ. ಕಳೆದ ವರ್ಷ 1 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿದ್ದ ರೈತ, ಈ ಬಾರಿ ಅದನ್ನು ಎರಡು ಎಕರೆಗೆ ವಿಸ್ತರಿಸಿದ್ದಾರೆ. ಕೃಷಿಯಿಂದ ನಷ್ಟವಾಗುತ್ತಿದೆ ಎಂದು ಗೋಳಿಡುವವರ ನಡುವೆ, ಪರ್ಯಾಯ ಕೃಷಿ ಪದ್ದತಿ ಮೂಲಕ ಲಾಭದತ್ತ ರೈತ ಮುನ್ನುಗ್ಗಿರುವುದು ಎಲ್ಲರಲ್ಲಿ ಹರ್ಷ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT