ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ: ಜೋಳದ ಬೆಳೆಗೆ ಲದ್ದಿ ಹುಳು ಕಾಟ

ಕಂಗಾಲಾದ ರೈತರು: ಕೃಷಿ ಅಧಿಕಾರಿಗಳಿಂದ ನೆರವಿನ ನಿರೀಕ್ಷೆ
Published 29 ನವೆಂಬರ್ 2023, 5:05 IST
Last Updated 29 ನವೆಂಬರ್ 2023, 5:05 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಜೋಳದ ಬೆಳೆಗೆ ಲದ್ದಿ ಹುಳು ಕಾಟ ಹೆಚ್ಚಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಕೋಠಾ, ಮೇದಿನಾಪುರ, ಆನ್ವರಿ, ಗೌಡೂರು, ಪೈದೊಡ್ಡಿ, ಮಾಚನೂರು, ವೀರಾಪುರ, ಗುಡದನಾಳ, ಹಟ್ಟಿ, ನಿಲೋಗಲ್ ಸೇರಿದಂತೆ ಸುತ್ತಮುತ್ತಲಿನ ರೈತರು 4,500 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬೆಳೆಯನ್ನು ಬೆಳೆದಿದ್ದಾರೆ. ಇದಕ್ಕೆ ಲದ್ದಿ ಹುಳು ಕಾಟ ಕಾಡುತ್ತಿದೆ.

ಲದ್ದಿ ಹುಳು ಜೋಳದ ದಂಟಿನ ಮಧ್ಯೆ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಬಂದ ಹುಳು ಜೋಳದ ಸುಳಿಯಲ್ಲಿ ಕತ್ತರಿಸಿ ಹಾಕುತ್ತದೆ. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಜೋಳದ ಗಿಡ ಕಾಳು ಕಟ್ಟುವುದಿಲ್ಲ. ಇಂತಹ ಸಮಸ್ಯೆಯನ್ನು ರೈತರು ಎದುರಿಸುವಂತಾಗಿದೆ. ಲದ್ದಿ ಹುಳು ಕಾಟ ತಪ್ಪಿಸಲು ಏನು ಮಾಡಬೇಕು ಎಂದು ತಿಳಿಯದಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ರೈತ ಸಂರ್ಪಕ ಕೇಂದ್ರದ ಕೃಷಿ ಅಧಿಕಾರಿ ಅವರನ್ನು ವಿಚಾರಿಸಿದರೆ ಅಸಮರ್ಪಕವಾದ ಉತ್ತರ ನಿಡುತ್ತಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಲಾಗಿದೆ. ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಕೈ ತಪ್ಪುವ ಭಯದಲ್ಲಿ ಇದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುತ್ತಾರೆ ಈ ಭಾಗದ ರೈತರು.

ರೈತರಿಗೆ ಮಾಹಿತಿ ಕೊರತೆ: ಜೋಳದ ಬೆಳೆಗೆ ಲದ್ದಿ ಹುಳು ಕೀಟ ಬಾಧೆ ನಿಭಾಯಿಸಲು ರೈತರಿಗೆ ಮಾಹಿತಿ ಕೊರತೆ ಎದುರಾಗಿದೆ. ಕೇವಲ ಕೀಟ ನಾಶಕಗಳನ್ನು ಸಿಂಪಡಿಸುತ್ತಿದ್ದು ರೈತರ ಸಮಗ್ರ ಕೀಟ ನಾಶಕ ನಿರ್ವಹಣೆ ಪದ್ಧತಿಯನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಕೃಷಿ ತಜ್ಞರು.

ಅನುಸರಿಸಬೇಕಾದ ಕ್ರಮ: ‘ರೈತರು ಲದ್ದಿ ಹುಳು ಕಾಟ ತಪ್ಪಿಸಲು ಇಮಾಮಿಟಿನ್, ಬೆಂಜೋಹೆಟ್ ಔಷದಿಯನ್ನು ಜೋಳದ ಸುಳಿಯೊಳಗೆ ಸಿಂಪಡಣೆ ಮಾಡಬೇಕು. ಹತೋಟಿಗೆ ಬರದಿದ್ದರೆ ಕೋರಾಜಿನ್ ಔಷಧ ಸಿಂಪಡಣೆ ಮಾಡಿದರೆ ಲದ್ದಿ ಹುಳು ಸಾಯುತ್ತದೆ. ರೈತರು ಭಯ ಪಡುವ ಅಗತ್ಯವಿಲ್ಲ’ ಎನ್ನುತ್ತಾರೆ ಕೃಷಿ ಅಧಿಕಾರಿ ಶಿವರಾಜ.

ಜೋಳದ ಬೆಳೆಗೆ ಲದ್ದಿ ಹುಳು ಕಾಟ ಹೆಚ್ಚಾಗಿದ್ದು ಕೃಷಿ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು. ಕೃಷಿಯಲ್ಲಿ ಅಗತ್ಯ ಸಲಹೆ ಸೂಚನೆ ನೀಡಿ ರೈತರನ್ನು ನಷ್ಟದಿಂದ ಪಾರು ಮಾಡಬೇಕು.

-ಶಿವರಾಜ ಮೊಟಗಿ, ರೋಡಲಬಂಡ ರೈತ

ರೈತರ ನೋವು ಆಲಿಸಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

-ವೀರೇಶ ಗೌಡೂರು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT