ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಿಜೆಪಿ ಕಿತ್ತೆಸೆಯಿರಿ

ವಿಚಾರ ಸಂಕಿರಣದಲ್ಲಿ ಎಸ್.ಆರ್. ಹಿರೇಮಠ ಹೇಳಿಕೆ
Last Updated 10 ಅಕ್ಟೋಬರ್ 2020, 3:21 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರದ ಬಿಜೆಪಿ ಸರ್ಕಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಸಂವಿಧಾನ, ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಪ್ರಹಾರ ಮಾಡುತ್ತಿದೆ. 2024ರಲ್ಲಿ ಪ್ರಜಾಪ್ರಭುತ್ವ ರಕ್ಷಿಸಲು ಬಿಜೆಪಿಯನ್ನು ಕಿತ್ತು ಎಸೆಯಬೇಕು ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದರು.

ನಗರದ ಶಮಿಮ್ ಫಂಕ್ಷನ್ ಹಾಲ್ ನಲ್ಲಿ ಜನಾಂದೋಲನ ಮಹಾಮೈತ್ರಿ ಹಾಗೂ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಸೇರಿ ವಿವಿಧ ಸಂಘಟನೆಗಳಿಂದ ಶುಕ್ರವಾರ ಆಯೋಜಿಸಿದ್ದ ಸಂಕಿರಣದಲ್ಲಿ ‘ಪ್ರಭುತ್ವ ಪರವಾದ ತೀರ್ಪುಗಳು ಹಾಗೂ ನ್ಯಾಯಾಂಗದ ಉತ್ತರದಾಯಿತ್ವ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಸ್ವಾತಂತ್ರ್ಯ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾದ ಪ್ರಜಾಪ್ರಭುತ್ವದ ಮೂರನೇಅಂಗವಾದ ನ್ಯಾಯಾಂಗ ವ್ಯವಸ್ಥೆ ಪ್ರಸ್ತುತ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದೆ. ಬಾಬ್ರಿ ಮಸೀದಿ, ರಾಮ ಜನ್ಮಭೂಮಿ ಹಾಗೂ ಇತರೆ ಮಹತ್ವದ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಪ್ರಕರಣಗಳನ್ನು ಸುಪ್ರಿಂಕೋರ್ಟ್ ನ ನ್ಯಾಯಪೀಠ ಏಕಪಕ್ಷೀಯವಾದ ತೀರ್ಪು ನೀಡಿದ್ದಾರೆ.ಆಡಳಿತ ವರ್ಗಕ್ಕೆ ಮೆಚ್ಚುವಂತಹ ಕಾರ್ಯ ಮಾಡುವುದು ದೇಶದ ಇತಿಹಾಸದಲ್ಲಿಯೇ ಮೊದಲು ಹಾಗೂ ವಿಷಾದನೀಯ ಬೆಳವಣಿಗೆ ಎಂದು ಟೀಕಿಸಿದರು.

ಸಂತ, ಶರಣರ, ಮಹಾತ್ಮರ ನಾಡಿ ನಲ್ಲಿ ಆರ್ ಎಸ್ಎಸ್, ಬಿಜೆಪಿಯವರು ದುರಾಡಳಿತ ನಡೆಸುತ್ತಿದ್ದಾರೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಾರ್ವಜನಿಕರು ಪ್ರಶ್ನೆ ಮಾಡಿ ದೊಡ್ಡ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

ಜನಾಂದೋಲನ ಮಹಾ ಮೈತ್ರಿಯ ರಾಘವೇಂದ್ರ ಕುಷ್ಟಗಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವಿರುದ್ಧ ಮಾತನಾಡಿದವರಿಗೆ ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಸಹೋದರತ್ವದಿಂದ ಇದ್ದ ನಾಗರಕರಲ್ಲಿ ವಿಷಬೀಜ ಬಿತ್ತುವ ಕಾರ್ಯ ಆರ್.ಎಸ್ಎಸ್ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಗಾಂಧಿ ಹಾಗೂ ಜೆಪಿ ನಾರಾಯಣರ ಆದರ್ಶ, ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಹಲಗೆ ಬಾರಿಸುವ ಮೂಲಕ ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ವಿದ್ಯಾಪಾಟೀಲ ಉದ್ಘಾಟಿಸಿದರು. ಸಂವಿಧಾನ ಹಾಗೂ ರಾಷ್ಟ್ರವಾದ ಎಂಬ ವಿಷಯದ
ಕುರಿತು ಚಿಂತಕ ಶಿವಸುಂದರ್ ಹಾಗೂ ವಕೀಲ ಅನಿಸ್ ಪಾಷಾ ಮಾತನಾಡಿದರು.

ಸಿಟಿಜನ್ ಫಾರ್ ಡೆಮಾಕ್ರಸಿಯ ಜಿಲ್ಲಾಧ್ಯಕ್ಷ ಖಾಜಾ ಅಸ್ಲಂ ಅಹ್ಮದ್, ರಬಾತ್ ಎ ಮಿಲ್ಲತ್ ಜಿಲ್ಲಾಧ್ಯಕ್ಷ ಮಹಮ್ಮದ್ ಎಕ್ಬಾಲ್, ಜಮಾತೆ ಇಸ್ಲಾಂ ಹಿಂದ್ ಜಿಲ್ಲಾಧ್ಯಕ್ಷ ಅಸೀಮ್ ಅಖ್ತರ್, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT