ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ರಾಯಚೂರು: ಗೆಲ್ಲುವ ಲೆಕ್ಕಾಚಾರದಲ್ಲೂ ಸೋಲಿನ ಭಯ

ಕ್ಷೇತ್ರದಲ್ಲಿ ಎಲ್ಲೆಡೆ ಸೋಲು–ಗೆಲುವಿನ ಚರ್ಚೆ: ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖಂಡರು, ಕಾರ್ಯಕರ್ತರು
Published 9 ಮೇ 2024, 5:49 IST
Last Updated 9 ಮೇ 2024, 5:49 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆ ಸುಗಮವಾಗಿ ನಡೆದಿದೆ. ರಾಜಕೀಯ ಮುಖಂಡರು, ಕಾರ್ಯಕರ್ತರು 15 ದಿನಗಳವರಗೆ ಕ್ಷೇತ್ರದಲ್ಲಿ ಸಂಚರಿಸಿ ಸುಸ್ತಾಗಿ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವರು ನೆಮ್ಮದಿಗಾಗಿ ಪ್ರವಾಸಕ್ಕೆ ಹೋಗಿದ್ದಾರೆ. ಇದೀಗ ಎಲ್ಲೆಡೆ ಸೋಲು–ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ.

ಬಿಜೆಪಿ ಗೆಲ್ಲುತ್ತಾ? ಕಾಂಗ್ರೆಸ್‌ ಗೆಲ್ಲುತ್ತಾ? ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಚುನಾವಣಾ ಕಣದಲ್ಲಿದ್ದ ಉಳಿದ ಅಭ್ಯರ್ಥಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಬಹುತೇಕರು ಬಿಜೆಪಿ–ಕಾಂಗ್ರೆಸ್‌ ಮಧ್ಯೆ ಗೆಲುವಿನ ಅಂತರ ಲೆಕ್ಕ ಹಾಕುತ್ತ ವಿಶ್ಲೇಷಿಸಿದರೆ, ಇನ್ನು ಕೆಲವರು ಫಲಿತಾಂಶ ಏನು ಆಗುತ್ತದೆಯೋ ಗೊತ್ತಿಲ್ಲ ಎಂದು ತಳಮಳದಿಂದಲೇ ಹೇಳಿಕೊಳ್ಳುತ್ತಿದ್ದಾರೆ.

ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಅವರು ಮತ್ತೊಮ್ಮೆ ಗೆಲ್ಲುವ ಉಮೇದಿನಲ್ಲಿ ಇದ್ದಾರೆ. ಕಾಂಗ್ರೆಸ್‌ನ ಜಿ.ಕುಮಾರ ನಾಯಕ ಲೋಕಸಭೆ ಪ್ರವೇಶ ಮಾಡುವುದು ಖಚಿತ ಎನ್ನುವ ಆತ್ಮವಿಶ್ವಾಸದಲ್ಲಿ ಇದ್ದಾರೆ. ಆದರೆ, ಅತ್ಯಂತ ಕಡಿಮೆ ಅಂತರದಲ್ಲೇ ಒಬ್ಬರ ಕೊರಳಿಗೆ ವಿಜಯ ಮಾಲೆ ಬೀಳಲಿದೆ.

ಬಿಜೆಪಿಯವರು ಮೋದಿ ಗಾಳಿಯನ್ನೇ ನಂಬಿದ್ದಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳು ನಮ್ಮ ಕೈಬಿಡಲು ಸಾಧ್ಯವಿಲ್ಲ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೇ 53.9ರಷ್ಟು ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಶೇ 43.3ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಕೊನೆ ಕ್ಷಣದಲ್ಲಿ ರಾಜಕೀಯ ಪಕ್ಷಗಳ ಗೆಲವಿನ ಲೆಕ್ಕಾಚಾರವೇ ಬುಡಮೇಲಾದರೂ ಅಚ್ಚರಿ ಇಲ್ಲ.

ರಾಯಚೂರಿನ ಎಸ್‍ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಗೆ ವಿವಿಧ ಮತಗಟ್ಟೆಗಳಿಂದ ತಂದಿದ್ದ ಮತಯಂತ್ರಗಳನ್ನು ಸಾಗಿಸಲಾಯಿತು
ರಾಯಚೂರಿನ ಎಸ್‍ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಗೆ ವಿವಿಧ ಮತಗಟ್ಟೆಗಳಿಂದ ತಂದಿದ್ದ ಮತಯಂತ್ರಗಳನ್ನು ಸಾಗಿಸಲಾಯಿತು
ಕ್ಷೇತ್ರದಲ್ಲಿ ಪುರುಷರಿಂದಲೇ ಹೆಚ್ಚು ಮತದಾನ ಸುರುಪುರ ಕ್ಷೇತ್ರದಲ್ಲಿ ಗರಿಷ್ಠ ಮತದಾನ ಪಂಚಾಯಿತಿ ಕಟ್ಟೆಗಳಲ್ಲಿ ಗೆಲುವಿನ ಲೆಕ್ಕಾಚಾರ
ಶೇ 64.66ರಷ್ಟು ಮತದಾನ
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ 64.66ರಷ್ಟು ಮತದಾನವಾಗಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶೇ 70.51 ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ 61.25 ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 62.46 ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ 61.85 ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ 62.11 ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ 76.04 ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ 61.08 ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 60.70ರಷ್ಟು ಮತದಾನವಾಗಿದೆ. 657867ಮಹಿಳೆಯರು 641917 ಮಹಿಳೆಯರು ಹಾಗೂ 22 ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಲ್ಲೇ ಅತಿ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಅತಿ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ನಗರದಲ್ಲೇ ಅತಿ ಕಡಿಮೆ ಮತದಾನವಾಗಿದೆ. ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದರೂ ಪುರುಷರೇ ಅಧಿಕ ಸಂಖ್ಯೆಯಲ್ಲಿ ಮತಹಕ್ಕು ಚಲಾಯಿಸಿದ್ದಾರೆ.
ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು
ರಾಯಚೂರು ಲೋಕಸಭಾ ಎಸ್‌.ಟಿ ಮೀಸಲು ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆದಿದ್ದು ಮತಯಂತ್ರಗಳನ್ನು ರಾಯಚೂರು ನಗರದ ಎಸ್‍ಆರ್‌ಪಿಎಸ್ ಪಿಯು ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಮತದಾನವಾದ ನಂತರ ವಿವಿಧ ಮತಗಟ್ಟೆಗಳಿಂದ ಮತಯಂತ್ರಗಳನ್ನು ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಟ್ರಾಂಗ್ ರೂಮ್‍ಗಳಿಗೆ ತಂದು ಶೇಖರಿಸಿದ್ದಾರೆ. ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿದ ನಂತರ ಅಭ್ಯರ್ಥಿಗಳು ಹಾಗೂ ಚುನಾವಣೆ ಅಧಿಕಾರಿಗಳ ಸಮ್ಮುಖದಲ್ಲಿ ಕೊಠಡಿಯ ಬಾಗಿಲನ್ನು ಹಾಕಿ ಸೀಲ್‌ ಮಾಡಲಾಗಿದೆ. ಭದ್ರತೆಗಾಗಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ಕೊಠಡಿ ಇರುವ ಕಾಲೇಜಿನ ಸುತ್ತಲೂ ಕಲಂ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕಾರ್ಯ ಮುಗಿಯುವವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT