ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ಸಂಭ್ರಮದ ರಾಯರ ಮಧ್ಯಾರಾಧನೆ

350ನೇ ಆರಾಧನಾ ಮಹೋತ್ಸವ ವಿಶೇಷ ಆಚರಣೆಗೆ ಸಂಕಲ್ಪ
Last Updated 5 ಆಗಸ್ಟ್ 2020, 13:10 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ರಾಯರ 349ನೇ ಮಧ್ಯಾರಾಧನೆಯನ್ನು ಸಂಭ್ರಮ ನೆರವೇರಿಸಲಾಯಿತು.

ತಿರುಪತಿ ತಿರುಮಲದಿಂದ ತರಲಾಗಿದ್ದ ವೆಂಕಟೇಶ್ವರನ ಶೇಷವಸ್ತ್ರವನ್ನು ರಾಯರ ಮೂಲವೃಂದಾವನಕ್ಕೆ ಪೀಠಾಧಿಪತಿ ಸಮರ್ಪಿಸಿದರು. ಆನಂತರ, ರಾಯರ ಪೂರ್ವಜನ್ಮಾವತಾರ ಪ್ರಲ್ಹಾದರಾಜರ ಮೂರ್ತಿಯನ್ನು ಉಯ್ಯಾಲೆ ರಜತ ಸಿಂಹಾಸನದ ಮೇಲೆ ಇರಿಸಿ ಪೂದಪೂಜೆ ಮಾಡಲಾಯಿತು.

ಆನಂತರ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ‘ಜಾತಿ, ಮತ, ಭಾಷೆ ಹಾಗೂ ಪ್ರಾಂತಕ್ಕೆ ಅತೀತರಾಗಿ ಸರ್ವರಿಂದಲೂ ಆರಾಧ್ಯರೂ, ಭಗವಂತನಿಂದ ವಿಶೇಷ ಅನುಗ್ರಹ ಪಾತ್ರರು ಆದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವವು ಶುಭದಿನವಾಗಿದೆ. ಶೇಷವಸ್ತ್ರ ಸಮರ್ಪಣೆ ಕಾರ್ಯಕ್ರಮವು ತಿರುಪತಿ ತಿರುಮಲ ದೇವಸ್ಥಾನ ಹಾಗೂ ಮಂತ್ರಾಲಯ ಮಠದ ನೀತಿ ನಿಯಮಗಳನುಸಾರ ಅನುಚಾನವಾಗಿ ನಡೆದುಕೊಂಡು ಬಂದಿದೆ’ ಎಂದರು.

‘ಪ್ರತಿವರ್ಷ ವರ್ಧಂತಿ ಉತ್ಸವ, ಆರಾಧನಾ ಮಹೋತ್ಸವ ಹಾಗೂ ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ತಿರುಪತಿಯಿಂದ ಶೇಷವಸ್ತ್ರ ರೂಪದಲ್ಲಿ ಶ್ರೀನಿವಾಸ ದೇವರು ಬಂದು, ಭಕ್ತರಾದ ರಾಘವೇಂದ್ರ ಸ್ವಾಮಿಗಳನ್ನು ಅನುಗ್ರಹಿಸುತ್ತಾ ಬಂದಿದ್ದಾರೆ. ಹರಿ, ಗುರು ಇಬ್ಬರು ಭಕ್ತರನ್ನು ಆಶೀರ್ವದಿಸುತ್ತಾ ಬರುತ್ತಿರುವುದು ಭಕ್ತರಿಗೆ ತಿಳಿದಿದೆ’ ಎಂದು ಹೇಳಿದರು.

‘ಕೊರೊನಾ ಮಹಾಮಾರಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಈ ಉಪದ್ರವ ಇರುವ ಕಾರಣ ಭಕ್ತರು ನೆರೆಯುವುದಕ್ಕೆ ಅವಕಾಶ ನೀಡಲಾಗಿಲ್ಲ. ಮಾಧ್ಯಮಗಳ ಮೂಲಕವೇ ವೀಕ್ಷಿಸುವುದಕ್ಕೆ ಅವಕಾಶ ಇದೆ. 350ನೇ ಆರಾಧನಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸುವುದಕ್ಕೆ ಸಂಕಲ್ಪ ಮಾಡಲಾಗಿದ್ದು, ಅದಕ್ಕೂ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.

ರಾಯರ ಮೂಲವೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರು ಪಂಚಾಮೃತ ಅಭಿಷೇಕ ನೆರವೇರಿಸಿದರು. ಆನಂತರ ಮಠದ ಪ್ರಾಕಾರದಲ್ಲಿ ಪ್ರಾತಃಕಾಲದ ರಥೋತ್ಸವ ಜರುಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT