ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಮಾತ್ಮನಿಗೆ ಅತಿಪ್ರಿಯವಾದ ಕಾಲವಿದು ’

ಮಂತ್ರಾಲಯ ಮಠದ ಪೀಠಾಧಿಪತಿಯಿಂದ 7ನೇ ಚಾತುರ್ಮಾಸ್ಯ ಆಚರಣೆ
Last Updated 30 ಜುಲೈ 2019, 15:33 IST
ಅಕ್ಷರ ಗಾತ್ರ

ರಾಯಚೂರು: ‘ಚಾತುರ್ಮಾಸ್ಯವು ಪರಮಾತ್ಮನಿಗೆ ಅತಿಪ್ರಿಯವಾದ ಕಾಲ ಎಂಬುದಾಗಿ ಪರಮಾತ್ಮನೇ ತನ್ನ ಮಡದಿ ಧರಣಿದೇವಿಗೆ ಹೇಳಿಕೊಂಡಿರುವುದು ವರಾಹಪುರಾಣದಲ್ಲಿದೆ. ಇದು ಪರಮಾತ್ಮನಯೋಗನಿದ್ರೆಯ ಕಾಲವಾಗಿದ್ದು, ತನ್ನನ್ನು ಪ್ರಸನ್ನೀಕರಿಸಿಕೊಳ್ಳುವ ನಿಮಿತ್ತವಾಗಿ ಚತುರವರ್ಣಿಯರು ಕೂಡಾ ಆಚರಿಸಬಹುದಾದ ವ್ರತ ನಿಯಮಗಳನ್ನೆಲ್ಲ ವರಾಹಪುರಾಣದಲ್ಲಿ ವಿವರಿಸಿದ್ದಾನೆ’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಉಪದೇಶಿಸಿದರು.

ಮಂತ್ರಾಲಯದಲ್ಲಿ7ನೇ ಚಾತುರ್ಮಾಸ್ಯವನ್ನು ಮಂಗಳವಾರ ಪ್ರಾರಂಭಿಸಿ ಅದರ ಮಹತ್ವವನ್ನು ಬೋಧಿಸಿದರು.

‘ಎಲ್ಲರೂ ಕೂಡಾ ಈ ಚತುರ್ಮಾಸ್ಯದಲ್ಲಿ ಉಪವಾಸ, ದಾನಧರ್ಮಗಳು, ವ್ರತಗಳನ್ನು ಆಚರಿಸುವುದು ರೂಢಿ. ಗೃಹಸ್ಥಾಶ್ರಮಿಗಳು, ಸನ್ಯಾಸಿಗಳು ಹಾಗೂ ವಾನಪ್ರಸ್ತಾಶ್ರಮಿಗಳಿಗೆ ಬಹಳ ಪ್ರಿಯವಾಗಿದೆ ಎಂಬುದು ಶಾಸ್ತ್ರ ಪುರಾಣ, ಸಂಪ್ರದಾಯಗಳಲ್ಲಿ ಹೇಳಲಾಗಿದೆ. ಆದರೆ, ಈಚೆಗೆ ಸನ್ಯಾಸಿಗಳು ಮಾತ್ರ ಚಾತುರ್ಮಾಸ್ಯ ಆಚರಿಸುವುದು ಬೆಳೆದು ಬಂದಿದೆ. ಹಿಂದಿನ ಕಾಲದಲ್ಲಿ ಪ್ರಭು ರಾಮನು ಚಾತುರ್ಮಾಸ್ಯ ಆಚರಿಸಿರುವುದು ಉಲ್ಲೇಖವಿದೆ. ಅದೇ ರೀತಿ ರಾಜ ಮಹಾರಾಜರು ಹಾಗೂ ಸನ್ಯಾಸಿಗಳು ಚಾತುರ್ಮಾಸ ಆಚರಿಸುವ ವಿಶೇಷ ಪದ್ಧತಿ ಇತ್ತು ಎಂಬುದು ಮಹಾಭಾರತ, ರಾಮಾಯಣ ಹಾಗೂ ಪುರಾಣಗಳಲ್ಲಿ ಇದೆ’ ಎಂದರು.

‘ಚಾತುರ್ಮಾಸ್ಯದ ಮೂಲಕ ಸನ್ಯಾಸಿಗಳು ಎಲ್ಲ ಜೀವಿಗಳಿಗೆ ಅಭಯ ನೀಡುತ್ತಿದ್ದರು. ಪ್ರಾಣಿಹಿಂಸೆ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದರು. ಸನ್ಯಾಸಿಗಳು ಚಾತುರ್ಮಾಸದಲ್ಲಿ ಜಪ, ತಪ ಮಾಡಿಕೊಂಡು ಪಾಠ, ಪ್ರವಚನಗಳೊಂದಿಗೆ ಉಪದೇಶ ಮಾಡುತ್ತಿದ್ದರು. ಇನ್ನುಳಿದ ದಿನಗಳಲ್ಲಿ ದೇಶ ಸಂಚಾರ ಮಾಡುತ್ತಿದ್ದರು. ಧಾರ್ಮಿಕ ಸಂಚಾರ ಮಾಡುತ್ತಿದ್ದರು. ಚಾತುರ್ಮಾಸ ಆಚರಣೆ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿದೆ’ ಎಂದು ವಿವರಿಸಿದರು.

‘ಇದು ನಾಲ್ಕು ತಿಂಗಳ ಅವಧಿಯಾಗಿದ್ದರೂ ಶಾಸ್ತ್ರದಲ್ಲಿ ಮತ್ತೊಂದು ಪ್ರಕಾರವೂ ಇದೆ. ಒಂದು ಪಕ್ಷವನ್ನು ಒಂದು ಮಾಸ ಎಂಬುದಾಗಿ ಇಟ್ಟುಕೊಂಡು ಎರಡು ತಿಂಗಳು ಪಾಠ, ಪ್ರವಚನ ಮಾಡಲಾಗುತ್ತದೆ. ಈ ಸತ್ಸಂಪ್ರದಾಯವನ್ನು ಮಂತ್ರಾಲಯ ಮಠದಲ್ಲಿ ಪರಿಪಾಲನೆ ಮಾಡಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮಗಳು:ಸೆಪ್ಟೆಂಬರ್ 14ರವರೆಗೆ ನಡೆಯಲಿರುವ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪ್ರತಿದಿನ ವಿದ್ವಾಂಸರ ಪ್ರವಚನ, ಭಜನಾ ಮಂಡಳಿಗಳ ಸಮಾವೇಶ, ಸಂಗೀತ ಕಾರ್ಯಕ್ರಮ, ವಿದ್ವಾಂಸರ ಸಮ್ಮೇಳನ, ಗುರು ಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‌ನಿಂದ ಹರಿಕಥಾಮೃತಸಾರ ಸಮಗ್ರ ಪಾರಾಯಣ ಮತ್ತು ಪರೀಕ್ಷೆ ನಡೆಯಲಿದೆ.

ಪೂರ್ಣ ಪರೀಕ್ಷೆ ಕೊಟ್ಟವರಿಗೆ ಒಂದು ಸಂಧಿಗೆ ಒಂದು ಸಾವಿರದಂತೆ 32 ಸಂಧಿಗೆ ₹ 32 ಸಾವಿರವನ್ನು ಬಹುಮಾನದ ರೂಪದಲ್ಲಿ ಕೊಡುವ ಯೋಜನೆ ಮಾಡಲಾಗಿದೆ. ಲಕ್ಷ್ಮೀ ಶೋಭಾನದ ಪಾರಾಯಣ, ಸಾಮೂಹಿಕ ಕುಂಕುಮಾರ್ಚನೆ, ಲಕ್ಷ್ಮೀಹೃದಯ, ನಾರಾಯಣಹೃದಯ ಪಾರಾಯಣ ನಡೆಯಲಿದೆ.

ಹರಿಕಥಾ ಸಂಪ್ರದಾಯ ನಶಿಸಿಹೋಗದಂತೆ ವಿದ್ವಾಂಸರ ಸಮ್ಮೇಳನ ನಡೆಸಲಾಗುತ್ತದೆ. ಹಿರಿಯ ವಿದ್ವಾಂಸರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡಲಾಗುತ್ತದೆ. ಆಗಸ್ಟ್‌ 1ರಂದು ಗುರುಪುಷ್ಯ ಯೋಗದ ಸಂದರ್ಭವಾಗಿ ಸಾಮೂಹಿಕ ಅಷ್ಟೋತ್ತರ ಪಾರಾಯಣ ನಡೆಯಲಿದೆ.

ಚಾತುರ್ಮಾಸ್ಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ನಡೆಯಲಿದ್ದು, ಅನೇಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ. ಜೊತೆಗೆ ಮಹಾ ರಥೋತ್ಸವ ನಡೆಯಲಿದೆ.

ಭಾದ್ರಪದ ಮಾಸದಲ್ಲಿ ಪ್ರೋಷ್ಟಪದಿ ಭಾಗವತ ಸಪ್ತಾಹ ಏರ್ಪಡಿಸಲಾಗುತ್ತದೆ. ಜೊತೆಗೆ ಹೃದಯ, ನೇತ್ರ ಸೇರಿದಂತೆ ಅನೇಕ ವಿಧವಾದ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ.

ಕೊನೆಯ ದಿನ ಮಂತ್ರಾಲಯದ ಹತ್ತಿರದ ಕೊಂಡಾಪುರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ದರ್ಶನ ಪಡೆದು ಸೀಮೋಲ್ಲಂಘನೆಯ ದೀಕ್ಷೆ ಸಂಪೂರ್ಣಗೊಳಿಸುತ್ತಾರೆ ಎಂದು ಶ್ರೀಮಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT