ಶುಕ್ರವಾರ, ಏಪ್ರಿಲ್ 16, 2021
20 °C
ಮಾನ್ವಿ ತಾಲ್ಲೂಕಿನಲ್ಲಿ ಒಟ್ಟು 26 ಸಾರ್ವಜನಿಕ ಕೆರೆಗಳು

ಮಾನ್ವಿ: ಕೆರೆಗಳ ಭರ್ತಿಗೆ ನಿರ್ಲಕ್ಷ್ಯ–ಆತಂಕ

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಬೇಸಿಗೆ ಆರಂಭವಾಗಿದ್ದರೂ ಮಾನ್ವಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಕೆರೆಗಳನ್ನು ಭರ್ತಿಗೊಳಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಬೇಸಿಗೆ ಸಮೀಪಿಸುತ್ತಿದ್ದಂತೆ ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಿ ಭರ್ತಿಗೊಳಿಸಲಾಗುತ್ತಿತ್ತು. ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 26 ಕೆರೆಗಳು ಇವೆ.

ಈ ಕೆರೆಗಳಿಗೆ ಪ್ರತಿ ವರ್ಷ ತುಂಗಭದ್ರಾ ಎಡದಂಡೆ ನಾಲೆಯ ನಂ.66,76, 82,85,98,102 ವಿತರಣಾ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿತ್ತು. ಈ ಬಾರಿ ಏಪ್ರಿಲ್ ತಿಂಗಳು ಆರಂಭವಾಗಿದ್ದರೂ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ತಾಲ್ಲೂಕಿನ ಬ್ಯಾಗವಾಟ ಹಾಗೂ ಸಾಯಿ ಕ್ಯಾಂಪಿನಲ್ಲಿರುವ ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿವೆ.

ಜಾನೇಕಲ್, ಅಮರೇಶ್ವರ ಕ್ಯಾಂಪ್, ಗೋಪಾಲನಗರ ಕ್ಯಾಂಪ್,  ಚೀಕಲಪರ್ವಿ ಕ್ಯಾಂಪ್, ಗೋವಿಂದರಾಜ ಕ್ಯಾಂಪ್ ಹಾಗೂ ಎಂ.ಪಿ ಕೆರೆಗಳು ಹನಿ ನೀರಿಲ್ಲದೆ ಖಾಲಿಯಾಗಿವೆ. ಪ್ರಮುಖವಾದ ಪೋತ್ನಾಳ, ಹಿರೇಕೊಟ್ನೇಕಲ್, ಕುರ್ಡಿ, ನಕ್ಕುಂದಿ, ಆಲ್ದಾಳ ಸೇರಿ ವಿವಿಧೆಡೆ ಇರುವ ಕೆರೆಗಳಲ್ಲಿ ಸರಾಸರಿ ಶೇ 30ರಷ್ಟು ಮಾತ್ರ ನೀರಿನ ಪ್ರಮಾಣ ಇದೆ. ಕೆರೆಗಳು ಭರ್ತಿಯಾಗದಿದ್ದರೆ ಬೇಸಿಗೆಯಲ್ಲಿ ಜಾನುವಾರುಗಳಿಗೂ ಸಹ ನೀರಿನ ಸಮಸ್ಯೆ ಉಂಟಾಗುತ್ತದೆ. ಕಾರಣ ಆದಷ್ಟು ಬೇಗನೆ ಹಳ್ಳಗಳಿಗೆ ಮತ್ತು ಕೆರೆಗಳ ಭರ್ತಿಗೆ ಕಾಲುವೆ ನೀರು ಹರಿಸಬೇಕು ಎಂಬುದು ಗ್ರಾಮೀಣ ಜನರ ಒತ್ತಾಯ.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಖಾಸಗಿ ಸಂಸ್ಥೆಗಳ ನಿರ್ವಹಣೆ ಮೂಲಕ ಒಟ್ಟು 135 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜಲಮೂಲದ ಕೊರತೆ ಹಾಗೂ ಯಂತ್ರೋಪಕರಣದ ದುರಸ್ತಿ ಕಾರಣದಿಂದ 20ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದಿಂದ ನಿರುಪಯುಕ್ತ ಘಟಕಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕಪಗಲ್, ನೀರಮಾನ್ವಿ, ಮಿಟ್ಟಿ ಕ್ಯಾಂಪ್ ಸೇರಿ ಕೆಲವು ಕಡೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಿ ಪೈಪ್‍ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಈಚೆಗೆ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಸ್ಥಳೀಯ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವಿ, ಮಾಡಗಿರಿ, ಪೋತ್ನಾಳ, ಬಾಗಲವಾಡ, ಕಪಗಲ್, ಬೊಮ್ಮನಾಳ, ಬೆಟ್ಟದೂರು, ಸಂಗಾಪುರ, ಕರಡಿಗುಡ್ಡ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾನ್ವಿ ಪಟ್ಟಣದಲ್ಲಿ ಶಾಶ್ವತ ಕುಡಿಯವ ನೀರಿನ ಯೋಜನೆ ಅಡಿಯಲ್ಲಿ ನಿರ್ಮಿಸಿರುವ 1280 ಮಿಲಿಯನ್ ಲೀಟರ್ ಸಂಗ್ರಹ ಸಾಮಥ್ರ್ಯದ ಕೆರೆ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಕಾಲುವೆ ನೀರಿನ ಮೂಲಕ ಕೆರೆಯ ಪೂರ್ಣ ಭರ್ತಿ, ವಿವಿಧ ವಾರ್ಡ್‍ಗಳಲ್ಲಿರುವ 40 ಹಳೆಯ ಕೊಳವೆಬಾವಿಗಳ ಪುನಶ್ಚೇತನ ಹಾಗೂ ಅಗತ್ಯ ಇರುವ ಕಡೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಲು ಪುರಸಭೆಯ ಆಡಳಿತ ನಿರ್ಧರಿಸಿದೆ. ಪ್ರಸ್ತುತ ಮಾನ್ವಿ ಪಟ್ಟಣದಲ್ಲಿ ಪ್ರತಿ 5ರಿಂದ6ದಿನಕ್ಕೊಮ್ಮೆ ಕುಡಿಯುವ ನೀರು ಪುರೈಸಲಾಗುತ್ತಿದೆ. ಪ್ರತಿ 3 ದಿನಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು