ಶುಕ್ರವಾರ, ಜುಲೈ 30, 2021
20 °C
ಮಾಸ್ಕ್‌ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿಕೆ

‘ಸಮುದಾಯದ ಸಹಕಾರದಿಂದ ಸೋಂಕು ತಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೊರೊನಾ ಸೋಂಕು ತಡೆಗಾಗಿ ಕೆಲವು ಜನರು ಮಾತ್ರ ನಿಯಮ ಪಾಲನೆ ಮಾಡಿದರೆ ಸಾಕಾಗುವುದಿಲ್ಲ. ಒಬ್ಬರಿಗೆ ಸೋಂಕು ಇದ್ದರೆ, ಇನ್ನೊಬ್ಬರಿಗೆ ಬೇಗನೆ ಹರಡಿಕೊಳ್ಳುತ್ತದೆ. ಹೀಗಾಗಿ ಸಮುದಾಯವು ಸಹಕಾರ ನೀಡಿದರೆ ಮಾತ್ರ ಸೋಂಕನ್ನು ಸಂಪೂರ್ಣ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ಮತ್ತು ನಗರಸಭೆಯಿಂದ ಗುರುವಾರ ಆಯೋಜಿಸಿದ್ದ ‘ಮಾಸ್ಕ್‌ ದಿನಾಚರಣೆ’ ನಿಮಿತ್ತ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿ ಪೂರ್ವ ಮಾತನಾಡಿದರು.

ಜಿಲ್ಲೆಯ ಪ್ರತಿ ಗ್ರಾಮಗಳು, ತಾಲ್ಲೂಕು ಕೇಂದ್ರಗಳಲ್ಲಿಯೂ ಮಾಸ್ಕ್‌ ದಿನ ಆಚರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ವಾರ ಪೂರ್ತಿ ಕೊರೊನಾ ಸೋಂಕು ತಡೆ ಸಪ್ತಾಹ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಅಂತರ ಕಾಪಾಡಿಕೊಳ್ಳಲು. ಇದು ಸಾಂಕೇತಿಕ ಆಚರಣೆ ಆಗಿರುವುದಿಲ್ಲ. ಮುಂಬರುವ ದಿನಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸುತ್ತಮುತ್ತಲಿನ ಜನರಿಗೂ ಇದರ ಬಗ್ಗೆ ತಿಳಿವಳಿಕೆ ಮೂಡಿಸಿ ಪಾಲನೆ ಆಗುವಂತೆ ಮಾಡಬೇಕು ಈ ವಿಚಾರದಲ್ಲಿ ಸರ್ಕಾರಿ ನೌಕರರು, ರಾಜಕಾರಣಿಗಳು, ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕಾಗುತ್ತದೆ. ಎಲ್ಲರೂ ಒಟ್ಟಾಗಿ ಪ್ರಯತ್ನಿಸಿದರೆ ಕೊರೊನಾ ಸೋಂಕು ತೊಲಗಿಸುವುದಕ್ಕೆ ಸಾಧ್ಯ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಕೊರೊನಾ ಮಹಾಮಾರಿ ಸೋಂಕು ತಡೆಗಾಗಿ ಸರ್ಕಾರದಿಂದ ಮಾಡಬೇಕಾದ ಪ್ರಯತ್ನಗಳೆಲ್ಲ ಮಾಡಲಾಗಿದೆ. ಇನ್ನು ಮುಂದೆ ಜನರು ವೈಯಕ್ತಿಕ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಹಾಗೂ ಸ್ಯಾನಿಟೈಜರ್‌ ಬಳಸುವುದನ್ನು ಮುಂದುವರಿಸಿದರೆ ಸೋಂಕನ್ನು ಸಂಪೂರ್ಣ ಇಲ್ಲವಾಗಿಸಲು ಸಾಧ್ಯ ಎಂದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸೋಂಕು ತಡೆ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ನಗರಸಭೆ, ಸೂಪರ್ ಮಾರ್ಕೆಟ್‌, ಶೆಟ್ಟಿಬಾಡಿ ಚೌಕ್‌, ಪಟೇಲ್‌ ವೃತ್ತ, ಚಂದ್ರಮೌಳೇಶ್ವರ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿವರೆಗೂ ಜಾಗೃತಿ ಜಾಥಾ ನಡೆಸಲಾಯಿತು.

ಜಿಲ್ಲಾಧಿಕಾರಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ತಹಶೀಲ್ದಾರ್‌ ಡಾ.ಹಂಪಣ್ಣ ಅವರು ಫಲಕಗಳನ್ನು ಹಿಡಿದುಕೊಂಡು ಮತ್ತು ಬ್ಯಾನರ್‌ನೊಂದಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದು ಸಾರ್ವಜನಿಕರ ಗಮನ ಸೆಳೆಯಿತು.

ವಿವಿಧ ಸಂಘ ಸಂಸ್ಥೆಗಳು, ಪೊಲೀಸರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು