ಶನಿವಾರ, ಮೇ 15, 2021
22 °C
ಮೂರು ರೀತಿಯ ಕಾವಲು ಪಡೆ ನಿಯೋಜನೆ, ಕಾಲೇಜು ಸುತ್ತ ಬಿಗಿ ಪೊಲೀಸ್‌ ಭದ್ರತೆ

‘ಸ್ಟ್ರಾಂಗ್‌ ರೂಂ’ ಸೇರಿದ ಮತಯಂತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶನಿವಾರ ಮತದಾನ ನಡೆದಿದ್ದು, ಇವಿಯಂಗಳು (ವಿದ್ಯಾನ್ಮಾನ ಮತಯಂತ್ರ) ಹಾಗೂ ಮತದಾನ ಖಾತ್ರಿ ಯಂತ್ರಗಳನ್ನು (ವಿವಿ ಪ್ಯಾಟ್‌) ನಗರದ ಎಸ್ಆರ್‌ಪಿಎಸ್ ಕಾಲೇಜಿನ ‘ಸ್ಟ್ರಾಂಗ್ ರೂಂ’ಗಳಿಗೆ ಸಾಗಿಸಿ, ಕೊಠಡಿಗಳಿಗೆ ಬೀಗಮುದ್ರೆ ಹಾಕುವ ಪ್ರಕ್ರಿಯೆ ರಾತ್ರಿಯೇ ನಡೆಯಿತು.

 ಶೇ 70.48 ಪ್ರತಿಶತ ಮತದಾನವಾಗಿದ್ದು, ಮತದಾನದ ನಂತರ 305 ಮತಗಟ್ಟೆಗಳಿಂದ ಮತದಾನ ಕಾರ್ಯಕ್ಕೆ ನಿಯೋಜಿತ ರಾಗಿದ್ದ ಸಿಬ್ಬಂದಿ ವಾಪಾಸ್ಸಾದರು. ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ ಮಸ್ಟರಿಂಗ್ ಕಾರ್ಯವನ್ನು ಕೈಗೊಳ್ಳಲಾಯಿತು. ಅದೇ ಕಾಲೇಜಿನಲ್ಲಿ ಸಿದ್ಧಪಡಿಸಿದ್ದ ಸ್ಟ್ರಾಂಗ್ ರೂಂನಲ್ಲಿ ಮತಪೆಟ್ಟಿಗಳನ್ನು ಬಿಗಿ ಭದ್ರತೆಯ ನಡುವೆ ಇರಿಸಲಾಯಿತು.

ಮತ ಎಣಿಕೆ ನಡೆಯಲಿರುವ ರಾಯಚೂರಿನ ಎಸ್‍ಆರ್‌ಪಿಎಸ್ ಪದವಿ ಪೂರ್ವ ಕಾಲೇಜಿಗೆ ಶನಿವಾರ ರಾತ್ರಿಯೇ ಪೊಲೀಸ್‌ ಬಿಗಿ ಬಂದೋಬಸ್ತ್ ನಡುವೆ ಮತಯಂತ್ರಗಳನ್ನು ತಂದು ಇರಿಸಲಾಯಿತು.

ಭಾನುವಾರ ಬೆಳಿಗ್ಗೆ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ, ಚುನಾವಣಾ ವೀಕ್ಷಕ ಶ್ರೀಧರ ಬಾಬು ಅಡ್ಡಂಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಚುನಾವಣಾಧಿಕಾರಿ ಹಾಗೂ ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ರಾಯಚೂರು ತಹಶೀಲ್ದಾರ್ ಹಂಪಣ್ಣ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸ್ಥಳದಲ್ಲಿ ಇದ್ದರು.

ಈ ವೇಳೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಾತನಾಡಿ, ಮತದಾನ ಮುಕ್ತಾಯವಾದ ನಂತರ 305 ಮತಗಟ್ಟೆಗಳಲ್ಲಿನ ಇವಿಎಂ ಯಂತ್ರಗಳನ್ನು ಹಾಗೂ ಕಾನೂನು ಬದ್ದ ಲಕೋಟೆಗಳನ್ನು ಎಸ್‍ಆರ್‌ಪಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲಾಗಿದ್ದ ಸ್ಟ್ರಾಂಗ್ ರೂಂಗೆ ಶನಿವಾರ ರಾತ್ರಿಯೇ ತರಲಾಗಿದೆ ಎಂದರು.

ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಏಜೆಂಟರು, ಚುನಾವಣಾಧಿಕಾರಿಯ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನಲ್ಲಿ ಮಾಡಿಕೊಳ್ಳಲಾದ ಎಲ್ಲಾ ಸಿದ್ಧತೆಗಳನ್ನು ತೋರಿಸಲಾಗಿದೆ. ಮತಯಂತ್ರಗಳ ಕಾವಲಿಗೆ ಮೂರು ರೀತಿಯ ಭದ್ರತೆ ಒದಗಿಸಲಾಗಿದೆ. ಒಳಗೆ ಕೇಂದ್ರೀಯ ಮೀಸಲು ಪಡೆ, ನಂತರ ಕೆಎಸ್‍ಆರ್‌ಪಿ ಹಾಗೂ ಹೊರಗೆ ಪೊಲೀಸರು ಸೇರಿದಂತೆ ಮೂರು ವಲಯದಲ್ಲಿ ಭದ್ರತೆಯನ್ನು ಒದಗಿಸಲಾಗಿದೆ. ಮತಯಂತ್ರಗಳನ್ನು ಸುರಕ್ಷಿತವಾಗಿವೆ. ಕಾಲೇಜಿನಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿದ್ದು, 24 ಗಂಟೆಯೂ ವಿಡಿಯೊ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಸ್ಥಳದಲ್ಲಿಯೇ ಅಗ್ನಿ ಶಾಮಕ ಪಡೆ ಹಾಗೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಕಾಲೇಜು ಸುತ್ತಾ ಅಗತ್ಯ ಪೊಲೀಸ್‌ ಭದ್ರತೆಯನ್ನೂ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು