ಶುಕ್ರವಾರ, ಮೇ 14, 2021
35 °C
ಹಿಂದಿನ ದಾಖಲೆಗಳನ್ನು ಮುರಿದ ಮತದಾನ ಪ್ರಮಾಣ

ಮಸ್ಕಿ ಉಪಚುನಾವಣೆ: ಮತದಾನ ಮುಕ್ತಾಯ, ಫಲಿತಾಂಶ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ (ರಾಯಚೂರು): ಒಂದು ತಿಂಗಳಿಂದ ಆರಂಭವಾದ ಮಸ್ಕಿ ವಿಧಾನಸಭೆ ಉಪಚುನಾವಣೆ ಪ್ರಕ್ರಿಯೆ ಕೊನೆಗೂ ಕೊನೆ ಹಂತ ತಲಪಿದ್ದು ಶನಿವಾರ ಮತದಾನವಾಗಿದೆ. ಬರುವ ಮೇ 2 ರಂದು ಮತಗಳ ಎಣಿಕೆ ನಡೆಯುವುದಷ್ಟೇ ಬಾಕಿ ಉಳಿದಂತಾಗಿದೆ.

ಹಿಂದೆ ನಡೆದ ವಿಧಾನಸಭೆ ಮೂರು ಚುನಾವಣೆಗಳಲ್ಲಾದ ಮತದಾನ ಪ್ರಮಾಣಕ್ಕೆ ಹೋಲಿಸಿದರೆ ಈ ಸಲ ದಾಖಲೆ ಪ್ರಮಾಣ ಶೇ 70.48 ರಷ್ಟು ಮತದಾನವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇರುವುದರಿಂದ ಯಾರು ಗೆಲ್ಲುತ್ತಾರೆ ಎನ್ನುವ ಸ್ಪಷ್ಟತೆಯಿಲ್ಲ.

ಎನ್‌ಆರ್‌ಬಿಸಿ 5ಎ ಕಾಲುವೆಗಾಗಿ ಹೋರಾಟ ನಡೆಸುತ್ತಿರುವ ಅಮಿನಗಡ, ಅಂಕುಶದೊಡ್ಡಿ, ಪಾಮನಕಲ್ಲೂರು ಹಾಗೂ ವಟಗಲ್‌ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರತಾಪಗೌಡ ಪಾಟೀಲ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂತು. ಮಸ್ಕಿ ಪಟ್ಟಣದಲ್ಲಿ ಮೌನಕ್ಕೆ ಜಾರಿರುವ ಮತದಾರರು ಯಾರ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ ಎಂಬುದು ಗುಟ್ಟಾಗಿದೆ. ಆದರೆ. ಪ್ರತಾಪಗೌಡರು ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಮೃಧುಧೋರಣೆಯನ್ನು ಹೆಚ್ಚು ಜನರು ಇಷ್ಟಪಟ್ಟು ಮತದಾನ ಮಾಡಿದಂತಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಬಸನಗೌಡ ತುರ್ವಿಹಾಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಳಗಾನೂರು ಪಟ್ಟಣದಲ್ಲಿ ಇಬ್ಬರಿಗೂ ಸಮನಾದ ಬೆಂಬಲ ಇದ್ದಂತೆ ಕಂಡುಬಂದರೂ, ಕೆಲವರು ಪ್ರತಾಪಗೌಡ ಪಾಟೀಲರ ಬಗ್ಗೆ ಅಸಮಾಧಾನ ಹೊರಹಾಕುವುದು ಸಾಮಾನ್ಯವಾಗಿತ್ತು. ಕ್ಷೇತ್ರದಾದ್ಯಂತ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷ ಬೆಂಬಲಿಸಿ ಮತದಾನ ಮಾಡುವುದಕ್ಕಿಂತ ಅಭ್ಯರ್ಥಿಗಳ ಹೆಸರಿನಲ್ಲೇ ಮತದಾನ ಮಾಡುತ್ತಿರುವುದು ಕಂಡುಬಂತು.

ಭಾರಿ ಭದ್ರತೆ: ಮಸ್ಕಿ ವಿಧಾನಸಭೆ ಕ್ಷೇತ್ರ ‌ವ್ಯಾಪ್ತಿಯಲ್ಲಿ ಹಣ ಹಂಚಿಕೆ ವಿಡಿಯೊ ವೈರಲ್‌ ಆಗಿದ್ದ ಹರ್ವಾಪುರ ಗ್ರಾಮದ ಎರಡೂ ಮತಗಟ್ಟೆಗಳಿಗೆ‌ ಭಾರಿ‌ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿಆರ್‌ಪಿಎಫ್ ಹಾಗೂ ಮಹಿಳಾ ಅರೆಸೇನಾ ಪಡೆಯವರನ್ನು ನಿಯೋಜಿಸಲಾಗಿತ್ತು.

ಪೊಲೀಸರ ವಿರುದ್ಧ ಆಕ್ರೋಶ: ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ತಾಲ್ಲೂಕಿನ ಕುರಕುಂದಿ ಗ್ರಾಮದ ಮತಗಟ್ಟೆ ಹತ್ತಿರ ಕಾಂಗ್ರೆಸ್ ಬೆಂಬಲಿಗರು ಪೊಲೀಸರ‌ ವಿರುದ್ಧ ಶನಿವಾರ ಆಕ್ರೋಶ ‌ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

'ಕಾಂಗ್ರೆಸ್‌‌ನವರ ಕೊರಳ ಪಟ್ಟಿ ಹಿಡಿದು ತಳ್ಳಿದ ಪೊಲೀಸರು, ಬಿಜೆಪಿಯವರು 100 ಮೀಟರ್ ‌ವ್ಯಾಪ್ತಿಯಲ್ಲೇ ನಿಂತಿದ್ದರೂ ಕೇಳುತ್ತಿಲ್ಲ' ಎಂದು ಕಾಂಗ್ರೆಸ್‌ ಬೆಂಬಲಿಗರು ಆರೋಪಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಮತದಾನ: ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರ್ವಿಹಾಳ ಅವರು ಮಸ್ಕಿ ವಿಧಾನಸಭೆ ಕ್ಷೇತ್ರ ‌ವ್ಯಾಪ್ತಿಯಲ್ಲಿರುವ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಗೆಲುವಿನ‌ ಚಿಹ್ನೆ ತೋರಿಸಿದರು. ‘ಎಲ್ಲ ಕಡೆಗೂ ಉತ್ತಮವಾದ ಬೆಂಬಲ ಸಿಗುತ್ತಿದ್ದು, ಗೆಲುವು ನಿಶ್ಚಿತವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಿಪಿಇ ಕಿಟ್‌ ಧರಿಸಿ ಮತಚಲಾವಣೆ:  ಮಸ್ಕಿ:ಕೋವಿಡ್‌ ಪಾಸಿಟಿವ್ ಕಾರಣ 'ಹೋಮ್‌ ಐಸೋಲೇಷನ್‌‘ ನಲ್ಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಕೋವಿಡ್‌ ಮಾರ್ಗಸೂಚಿ ಅನ್ವಯ ಪಿ‍ಪಿಇ ಕಿಟ್‌ ಧರಿಸಿ ಶನಿವಾರ ಸಂಜೆ 6.30ಕ್ಕೆ ಅವರ ಮನೆ ಹತ್ತಿರದ ಕಿಲ್ಲಾ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.

ಸಂಜೆ 6 ರಿಂದ 7 ಗಂಟೆ ವರೆಗೆ ಕೋವಿಡ್‌ ಪಾಸಿಟಿವ್ ಇದ್ದವರಿಗೆ ಮತ ಚಲಾಯಿಸಲು ಪ್ರತ್ಯೇಕ ಸಮಯ ಗೊತ್ತು ಮಾಡಲಾಗಿತ್ತು. ಈ ಸಮಯದಲ್ಲಿಯೇ ಅವರು ಬಂದು ಮತ ಚಲಾಯಿಸಿದರು.

ಅತಿಸೂಕ್ಷ್ಮ ಮತಗಟ್ಟೆಗೆ ಹೆಚ್ಚಿನ‌ ಭದ್ರತೆ: ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5ಎ ಕಾಲುವೆಗಾಗಿ ಹೋರಾಟ ನಡೆಸಿರುವ ನಾಲ್ಕು ಗ್ರಾಮ ಪಂಚಾಯಿತಿಗಳ‌ ಭಾಗದ ಮತಗಟ್ಟೆಗಳಿಗೆ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಟಗಲ್ ಸೇರಿದಂತೆ ಏಳು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಸಿಆರ್ ಪಿಎಫ್ ತಂಡದವರನ್ನು ನಿಯೋಜಿಸಲಾಗಿತ್ತು. ಜೊತೆಗೆ ಪೊಲೀಸರು ಇದ್ದರು. ಮತಗಟ್ಟೆ ಆಸುಪಾಸು ಬಂದೂಕುದಾರಿ ಪಡೆ ಇತ್ತು.

29 ಶಿಕ್ಷಕರ ವಿರುದ್ಧ ದೂರು ದಾಖಲು
ಮಸ್ಕಿ (ರಾಯಚೂರು):
ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ತರಬೇತಿ ಹಾಗೂ ಕರ್ತವ್ಯಕ್ಕೆ ಗೈರು ಆಗಿರುವ 29 ಜನ ಶಿಕ್ಷಕರ ಅವರ ವಿರುದ್ಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹಾಗೂ ತಹಶೀಲ್ದಾರ್ ಅವರು ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು