ಸೋಮವಾರ, ಸೆಪ್ಟೆಂಬರ್ 26, 2022
20 °C

ಏಮ್ಸ್‌ ಹೋರಾಟಕ್ಕೆ ಮಠಾಧೀಶರ ಬೆಂಬಲ: ಬಸವರಾಜ ಕಳಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಏಮ್ಸ್‌ ಸಂಸ್ಥೆ ಸ್ಥಾಪಿಸುವಂತೆ ಜಿಲ್ಲಾ ಏಮ್ಸ್‌ ಹೋರಾಟ ಸಮಿತಿಯಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಆಗಸ್ಟ್‌ 20 ರಂದು 100ನೇ ದಿನಕ್ಕೆ ತಲುಪುತ್ತಿದ್ದು, ಅಂದು 30 ಕ್ಕೂ ಹೆಚ್ಚು ಮಠಾಧೀಶರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಡಾ.ಬಸವರಾಜ ಕಳಸ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮಠಾಧೀಶ್ವರರೆಲ್ಲ‌ ಹೊರಾಟದ ವೇದಿಕೆಗೆ ಬರುವುದಾಗಿ ಸ್ವಯಂಪ್ರೇರಣೆಯಿಂದ ಹೇಳಿದ್ದಾರೆ. ಹೋರಾಟವನ್ನು 100 ನೇ ದಿನಕ್ಕೆ ತರಲು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಯಾವುದೇ ರಾಜಕೀಯ ಪಕ್ಷವು ಸಮರ್ಪಕವಾಗಿ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ರಾಜಕಾರಣಿಗಳಿಗೆ ಪಕ್ಷ ರಾಜಕಾರಣ ಮುಖ್ಯವೋ ಅಥವಾ ರಾಯಚೂರು ಅಭಿವೃದ್ಧಿ ಮುಖ್ಯವೊ ಎಂಬುದರ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ಕೈಗೊಳ್ಳಬೇಕು. ಈ ಹೋರಾಟ ಯಾವುದೇ ರಾಜಕೀಯ ಪಕ್ಷದ‌ ವಿರೋಧಿಯಲ್ಲ ಅಥವಾ ಪರವೂ ಅಲ್ಲ ಎಂದು ಹೇಳಿದರು.

ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲೂ ಏಮ್ಸ್‌ ಬೇಡಿಕೆಯನ್ನು ಬೆಂಬಲಿಸಿ ನಡೆಸುತ್ತಿರುವ ಹೋರಾಟಗಳು, ರಾಯಚೂರಿನಲ್ಲಿ ನಿರಂತರ ಹೋರಾಟ ಮುಂದುವರಿಸಲು ಪ್ರೇರಣೆಯಾಗಿದೆ. ಮಂತ್ರಾಲಯ ಶ್ರೀಗಳು ಕೂಡಾ ಹೋರಾಟವನ್ನು ಬೆಂಬಲಿಸುತ್ತಿರುವುದು ಬಹಳ‌ ವಿಶೇಷ.‌ ಹತ್ತಾರು ಸಂಘ-ಸಂಸ್ಥೆಗಳು ಹೋರಾಟವನ್ನು ಬೆಂಬಲಿಸಿವೆ ಎಂದು ತಿಳಿಸಿದರು.

ಬರುವ ಆಗಸ್ಟ್‌ 27 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಯಚೂರಿಗೆ ಬರುತ್ತಿದ್ದಾರೆ. ಏಮ್ಸ್‌ಗೆ ಬೆಂಬಲ ಇದೆಯೋ ಇಲ್ಲವೋ ಎಂಬುದಕ್ಕೆ ಮಾತ್ರ ಅವರಿಂದ ಉತ್ತರ ನಿರೀಕ್ಷಿಸಲಾಗುವುದು. ಯಾವುದೇ ಭರವಸೆಯನ್ನು ನಂಬಲು ತಯಾರಿಲ್ಲ ಎಂದು ಹೇಳಿದರು.

ಹೋರಾಟ ಸಮಿತಿ ಪದಾಧಿಕಾರಿ  ಅಶೋಕ‌ ಜೈನ್ ಮಾತನಾಡಿ, ಧರಣಿ 33 ನೇ ದಿನ ಹಾಗೂ 95 ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರು ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಹೇಳಿದರು.

ಆಗಸ್ಟ್‌ 27 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಹೋರಾಟಗಾರರು ಚರ್ಚಿಸಲು ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಸಚಿವರ ಸಮಯ ಪಟ್ಟಿಯಲ್ಲೇ ಈ ಬಗ್ಗೆ ಸೇರ್ಪಡೆಗೊಳಿಸಬೇಕು. ಜಿಲ್ಲಾ ಬಿಜೆಪಿಯವರು ಇದುವರೆಗೂ ಧರಣಿ ಬೆಂಬಲಿಸಿ ಪಾಲ್ಗೊಂಡಿಲ್ಲ ಎಂದು ತಿಳಿಸಿದರು.

ಹೋರಾಟಗಾರರಾದ ಎಂ.ಆರ್‌.ಭೇರಿ, ವೀರಭದ್ರಯ್ಯಸ್ವಾಮಿ, ಗುರುರಾಜ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು