ಸೋಮವಾರ, ಡಿಸೆಂಬರ್ 16, 2019
17 °C
ಆಸ್ಪತ್ರೆ ವ್ಯವಸ್ಥೆ ಬಗ್ಗೆ ರೋಗಿಗಳಿಂದ ಮಾಹಿತಿ ಸಂಗ್ರಹಿಸಿದರು

ರಿಮ್ಸ್‌ನಲ್ಲಿ ವಾಸ್ತವ್ಯ ಹೂಡಿದ ಸಚಿವ ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿ ರಾಯಚೂರಿಗೆ ಬಂದಿರುವ ಆರೋಗ್ಯ ಸಚಿವರೂ ಆದ ಶ್ರೀರಾಮುಲು ಅವರು ರಿಮ್ಸ್‌ ಆಸ್ಪತ್ರೆಗೆ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆಯಲ್ಲಿಯೆ ವಾಸ್ತವ್ಯ ಉಳಿದರು.

ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿರುವ ಸಚಿವರು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.

ಆಸ್ಪತ್ರೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಕೆಲಸ ಮಾಡಬೇಕಿದೆ. ಎಂಬಿಬಿಎಸ್ ವೈದ್ಯರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ದಂತ ವೈದ್ಯರ ನೇರ ನೇಮಕಾತಿ ನಡೆಸಲಾಗುವುದು. ರಾಜ್ಯದಲ್ಲಿ 1700 ಸರ್ಕಾರಿ ವೈದ್ಯರಿದ್ದಾರೆ. ಆಸ್ಪತ್ರೆಗಳಲ್ಲಿ ಬಡವರಿಗೆ ಮೂಲ ಸೌಲಭ್ಯಗಳು ಸಿಗಬೇಕು. ಅದನ್ನು ಅರ್ಥಮಾಡಿಕೊಳ್ಳಲು ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.

ರಾಯಚೂರಿನಿಂದ ಬಳ್ಳಾರಿ ಹಾಗೂ ಬೇರೆಡೆ ರೋಗಿಗಳನ್ನು ಕಳುಹಿಸುವುದಿದೆ. ಇದರ ಕುರಿತು ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಹಾವು, ಚೇಳು ಕಡಿತಕ್ಕೆ ರಾಜ್ಯದಲ್ಲಿ ಔಷಧಿ ಕೊರತೆಯಿದೆ. ಒಂದೆರಡು ದಿನಗಳಲ್ಲಿ ಔಷಧಿ ಸಿಗುವ ಹಾಗೇ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಕಣ್ಣೀರಿಟ್ಟ ಕಾರ್ಮಿಕರು: ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಸ್ವಚ್ಛತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಪ್ರಶ್ನಿಸಿದರೆ ಕೆಲಸದಿಂದ ತೆಗೆದುಹಾಕುತ್ತಾರೆ. ಕಡಿಮೆ ವೇತನ ನೀಡಲಾಗುತ್ತಿದೆ ಎಂದು ’ಡಿ’ ಗ್ರೂಪ್‌ ಹೊರಗುತ್ತಿಗೆ ಸಿಬ್ಬಂದಿ ಸಚಿವರಿಗೆ ದೂರು ಸಲ್ಲಿಸಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಸಚಿವರೊಂದಿಗೆ ಶಾಸಕ ಡಾ.ಶಿವರಾಜ ಪಾಟೀಲ ಕೂಡಾ ವಾಸ್ತವ್ಯ ಹೂಡಿದರು. ಆಸ್ಪತ್ರೆ ಪರಿಶೀಲನೆ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಬಿಜೆಪಿ ಮುಖಂಡರು ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು