ಲಿಂಗಸುಗೂರು: ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ಸರ್ವೆ ನಂಬರ್ 62 ಸೇರಿ ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸೇ ರಿದ ಭೂಮಿಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ದುರ್ಬಳಕೆ ಮಾಡಿಕೊಂಡ ಕಾರಣ ಜಾನುವಾರು ಮೇಯಿಸಲು ಭೂಮಿ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕುರಿಗಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಬಿ.ಶುಗರ್ಸ್ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪನೆ ಹೆಸರಲ್ಲಿ ಖರೀದಿ ಮಾಡಿಕೊಂಡ ಜಮೀನಲ್ಲದೆ ಹೆಚ್ಚುವರಿ ಜಮೀನಿನಲ್ಲಿ ಕಲ್ಲು ಗುಡ್ಡ, ಗಿಡ–ಮರ ಕಿತ್ತು ಸಮತಟ್ಟುಗೊಳಿಸುತ್ತಿದೆ. ತನ್ನ ಜಮೀನಿನಿಂದ ತೆಗೆದ ವ್ಯರ್ಥ ಕಲ್ಲು–ಮಣ್ಣನ್ನು ಚಿಕ್ಕ ಉಪ್ಪೇರಿ ಗ್ರಾಮದ ಸರ್ವೆ ನಂಬರ್ 62ರಲ್ಲಿ ಅಕ್ರಮವಾಗಿ ಹಾಕಿ ಸರ್ಕಾರದ ನಿಯಮ ಗಾಳಿಗೆ ತೂರಿದೆ ಎನ್ನುವ ಆರೋಪ ಕೇಳಿಬಂದಿದೆ.
ಸರ್ವೆ ನಂಬರ್ 62ರಲ್ಲಿ ಈ ಹಿಂದೆ ರಾಮಲಿಂಗ ಶರಣರು ವಾಸ್ತವ್ಯ ಮಾಡುತ್ತಿದ್ದರು. ಬೆಟ್ಟದ ಮೇಲೆ ಪುಟ್ಟ ಕಟ್ಟಡವೊಂದನ್ನು ನಿರ್ಮಿಸಿ ಟಿನ್‍ಶೆಡ್ ಹಾಕಲಾಗಿತ್ತು. ದೇವಸ್ಥಾನದ ಅಭಿವೃದ್ಧಿ ಹೆಸರಲ್ಲಿ ತಮ್ಮ ಮತ್ತು ಸರ್ಕಾರಿ ಜಮೀನು ಕಲ್ಲು, ಮಣ್ಣು ಆಳೆತ್ತರ ಸುರಿದು ಅಂದಾಜು 20 ಎಕರೆ ಜಮೀನು ಅಕ್ರಮವಾಗಿ ಸಮತಟ್ಟು ಮಾಡುವ ಮೂಲಕ ಭವಿಷ್ಯದಲ್ಲಿ ದುರ್ಬಳಕೆ ಮಾಡಿಕೊಳ್ಳುವ ಇರಾದೆ ಹೊಂದಿದ್ದಾರೆ ಎಂಬುದು ಸಾಮೂಹಿಕ ಆರೋಪ.
ಸುಣಕಲ್ಲಿನ ಖಾರೇಜಖಾತಾ ಸ.ನಂ 73 (26-38), 85 (00-10ಎ), ಕರ್ನಾಟಕ ಸರ್ಕಾರದ ಭೂಮಿ 72/1 (08 ಎಕರೆ), 72/2 (7-14ಎ), 72/3 (07-14), 68/1 (24-25ಎ), 68/2 (02ಎ), ಅರಣ್ಯ ಭೂಮಿ 80/3 (01-27ಎ), 82/3 (4-32ಎ), 84 (05-21ಎ), 85 (18-20ಎ), ಸರ್ವೆ ನಂಬರ್ 86 (07-19ಎ)ರಲ್ಲಿ 111.2 ಎಕರೆ ಸೇರಿದಂತೆ ಚಿಕ್ಕ ಉಪ್ಪೇರಿ ಸ.ನಂ 62ರಲ್ಲಿ 92 ಎಕರೆ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ದನಗಾಯಿ, ಕುರಿಗಾಯಿಗಳನ್ನು ಒಕ್ಕಲೆಬ್ಬಿಸಿರುವುದು ಸಂಕಷ್ಟ ತಂದೊಡ್ಡಿದೆ.
‘ರಾಮಲಿಂಗೇಶ್ವರ ಮಠದ ಹೆಸರಲ್ಲಿ ಸರ್ಕಾರಿ ಸ.ನಂ 62ರಲ್ಲಿ 20 ಎಕರೆಗೂ ಹೆಚ್ಚು ಕಲ್ಲುಗುಡ್ಡ ಪ್ರದೇಶದಲ್ಲಿ 15 ರಿಂದ 20 ಅಡಿ ಎತ್ತರ ಅಕ್ರಮವಾಗಿ ಕಲ್ಲು ಮಣ್ಣು ತುಂಬಿದ್ದಾರೆ. ಜಾನುವಾರು, ಕುರಿ, ಮೇಕೆ ಮೇಯಿಸಲು ಸ್ಥಳ ಸಿಗದೆ ಪರದಾಡುವಂತಾಗಿದೆ. ಸ.ನ. 62ರ ದುರ್ಬಳಕೆಗೆ ಪರವಾನಗಿ ನೀಡಿದವರು ಯಾರು ಎಂಬುದು ತಿಳಿಯದಾಗಿದೆ. ಈ ಕುರಿತು ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪರಸಪ್ಪ ಕುರುಬರ ಒತ್ತಾಯಿಸಿದ್ದಾರೆ.
‘ಸುಣಕಲ್ಲ ಮತ್ತು ಚಿಕ್ಕ ಉಪ್ಪೇರಿ ಕುರಿಗಾಯಿಗಳು ಮತ್ತು ದನಗಾಯಿಗಳ ಪಾಲಿಗೆ ವರವಾಗಿದ್ದ ಸರ್ಕಾರ ಜಮೀನು ಒತ್ತುವರಿ, ಅಕ್ರಮ ಕಲ್ಲು–ಮಣ್ಣ ಸ್ಥಳಾಂತರ ಮತ್ತು ಸಂಗ್ರಹಣೆಯಿಂದ ಕುರಿ, ಮೇಕೆ, ದನ ಕರು ಮೇಯಿಸಲು ಕೃಷ್ಣಾ ನದಿಗೆ ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಹನುಮಪ್ಪ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
‘ವಾಸ್ತವ ವರದಿ ಸಲ್ಲಿಕೆ’
ಕಂದಾಯ ನಿರೀಕ್ಷಕ ರಾಮಕೃಷ್ಣ ಮಾತನಾಡಿ ‘ಕಂದಾಯ ಮತ್ತು ಸರ್ವೆ ಇಲಾಖೆ ಭೂಮಾಪಕರ ಸಹಯೋಗದಲ್ಲಿ ಕರ್ನಾಟಕ ರೈತ ಸಂಘದ ದೂರು ಆಧರಿಸಿ ಸರ್ಕಾರಿ ಜಮೀನು ಸರ್ವೆ ಮಾಡಿದ್ದೇವೆ. ಚಿಕ್ಕ ಉಪ್ಪೇರಿ ಗ್ರಾಮದ ಸ.ನಂ 62ರಲ್ಲಿ ಕಲ್ಲು ಮಣ್ಣು ಹಾಕಿ ನಿಯಮ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಒಂದೆರಡು ದಿನಗಳಲ್ಲಿ ಈ ಕುರಿತು ವಾಸ್ತವ ವರದಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.