ಭಾನುವಾರ, ಮೇ 29, 2022
30 °C
ಅಧಿಕಾರಿಗಳಿಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ ಸೂಚನೆ

ಮಾರ್ಚ್‌ ಅಂತ್ಯದೊಳಗೆ ಕೆಲಸ ಪೂರ್ಣಗೊಳಿಸಿ- ಶಾಸಕ ಬಸನಗೌಡ ದದ್ದಲ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರಸಕ್ತ ವರ್ಷಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಂಜೂರಿ ಮಾಡಿರುವ ಎಲ್ಲ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಬಸನಗೌಡ ದದ್ದಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿ ಅವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಲೆಗಳಿಗೆ ಮಂಜೂರಿಯಾದ ಆವರಣ ಗೋಡೆ, ಕುಡಿಯುವ ನೀರು ಹಾಗೂ ಶೌಚಾಲಯ ಕಾಮಗಾರಿಗಳನ್ನು ಒತ್ತು ಕೊಟ್ಟು ಮುಗಿಸಬೇಕು. ಅನುದಾನ ಇದ್ದರೂ ಕೆಲವು ಕಡೆಗಳಲ್ಲಿ ಕಾಮಗಾರಿ ಆರಂಭಿಸಿಲ್ಲ. ಜಾಗದ ಲಭ್ಯತೆ ಇಲ್ಲದಿರುವ ಸಮಸ್ಯೆಗಳನ್ನು ಗಮನಕ್ಕೆ ತರಬೇಕು. ಆದಷ್ಟು ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವುದಕ್ಕೆ ಹೋಗಬಾರದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್‌ ಆಪರೇಟರ್‌ಗಳು ಮತ್ತು ಎಂಜಿನಿಯರುಗಳ ಬಗ್ಗೆಯೇ ಅತಿಹೆಚ್ಚು ದೂರುಗಳು ಬರುತ್ತಿವೆ. ಅವರಿಂದಾಯೇ ಯೋಜನೆಗಳ ಜಾರಿಯಲ್ಲಿ ವಿಳಂಬವಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

ಎಂಜಿನಿಯರುಗಳು ಸ್ಥಳಕ್ಕೆ ಹೋಗಿ ಕಾಮಗಾರಿ ಪರಿಶೀಲನೆ ಮಾಡದಿರುವುದು, ವೆಂಡರ್‌ಗಳಿಗೆ ಸರಿಯಾದ ಸಮಯಕ್ಕೆ ಹಣ ಹಾಕದೆ ಇರುವುದು. ಮಾಡಿರುವ ಕೆಲಸಕ್ಕೆ ಕೊಡಬೇಕಾದ ಹಣಕ್ಕೆ ಕೊಕ್ಕೆ ಹಾಕಿದರೆ ಸಹಿಸಲಾಗದು. ಜನರ ಹಿತದೃಷ್ಟಿಯಿಂದ ಎಲ್ಲರೂ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಹಾಗೂ ರಾಜಕೀಯವಾಗಿ ಏನಾದರೂ ಒತ್ತಡಗಳಿದ್ದರೆ ತಿಳಿಸಬೇಕು. ಕೆಲಸಕ್ಕೆ ಹಾಜರಾಗದಿರುವುದು ಸರಿಯಲ್ಲ. ಯಾರದೋ ಒತ್ತಡಕ್ಕೆ ಮಣಿದು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಮಾಡುವುದಕ್ಕೆ ಹೋಗಬಾರದು. ಸಗಮಕುಂಟಾ, ಗುಂಜಳ್ಳಿ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪಿಡಿಓಗಳ ಬಗ್ಗೆ ದೂರುಗಳು ಬಂದಿವೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಮಸ್ಯೆ ಹೇಳಿಕೊಂಡು ಪಿಡಿಓಗಳು ಪರಿಹಾರ ಕಂಡುಕೊಳ್ಳಬೇಕು. ಒಟ್ಟಾರೆ ಜನಹಿತದೃಷ್ಟಿ ಬಗ್ಗೆ ಗಮನ ಕೊಡಬೇಕು ಎಂದು ತಿಳಿಸಿದರು.

ಕ್ರಿಯಾಯೋಜನೆ ರೂಪಿಸುವಾಗಲೇ ಪ್ರತಿಯೊಂದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಮೇಲಿಂದ ಮೇಲಿ ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಇದೀಗ ಬೇಸಿಗೆಕಾಲ ಸಮೀಪಿಸಿದ್ದು, ಕುಡಿಯುವ ನೀರು ಸಮಪರ್ಕವಾಗಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಗಣೇಶ ಸಾಕ್ರೆ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು