ಮಂಗಳವಾರ, ಜೂನ್ 28, 2022
26 °C

ಗುಣಮಟ್ಟದ ಬಿತ್ತನೆ ಬೀಜಗಳ ಶೇಖರಣೆಗೆ ಸೂಚನೆ: ಶಾಸಕ ನಾಡಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಈ ಬಾರಿ ಮುಂಗಾರು ಹಂಗಾಮಿನಲ್ಲಿಯೇ ಉತ್ತಮ ಮಳೆಯಾಗಿರುವುದರಿಂದ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಅಗತ್ಯಕ್ಕೆ ತಕ್ಕಂತೆ ಶೇಖರಣೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿರುವುದಾಗಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸೂರ್ಯಕಾಂತಿ ಸೇರಿ ಇನ್ನಿತರ ಬೀಜಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳ ಕೊರತೆಯಿದೆ. ಕಾರಣ ಕೃಷಿ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ವಾರದೊಳಗೆ ಅಗತ್ಯಕ್ಕೆ ತಕ್ಕಂತೆ ಬಿತ್ತನೆಬೀಜ ಮತ್ತು ಗೊಬ್ಬರ ಸಂಗ್ರಹಣೆಗೆ ತಿಳಿಸಲಾಗಿದೆ. ರೈತರು ಆತಂಕಕ್ಕೆ ಒಳಗಾಗಬಾರದು. ಕಳಪೆ ಬೀಜ ಮತ್ತು ಗೊಬ್ಬರ ಮಾರಾಟ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

₹25.50 ಕೋಟಿ ಮಂಜೂರು: ನಗರೋತ್ಥಾನ-4 ಯೋಜನೆಯಡಿ ನಗರದಲ್ಲಿ ರಸ್ತೆಗಳ ಅಭಿವೃದ್ದಿ ಮಾಡುವ ಕುರಿತು ಸರ್ವೆ ನಡೆಸಿ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದರಿಂದ ರಾಜ್ಯ ಸರ್ಕಾರ ₹25.50 ಕೋಟಿ ಅನುದಾನ ಮಂಜೂರು ಮಾಡಿದೆ. ಇನ್ನೂ 10 ದಿನಗಳಲ್ಲಿ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ. ಈ ಅನುದಾನದಿಂದ ನಗರದಲ್ಲಿ ಶೇ 98ರಷ್ಟು ರಸ್ತೆಗಳ ಅಭಿವೃದ್ದಿ ಪೂರ್ಣವಾಗಲಿದೆ. ಜೊತೆಗೆ ದೊಡ್ಡ ಕೆರೆಯ ತಡೆಗೋಡೆ ದುರಸ್ತಿ ಕಾಮಗಾರಿಗೆ ₹98 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.

167 ಕ್ಯಾಮೆರಾ ಅಳವಡಿಕೆ: ನಗರದ ವಿವಿಧ ಬಡಾವಣೆಗಳಲ್ಲಿ ಹಗಲೊತ್ತಿನಲ್ಲಿಯೇ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ₹70 ಲಕ್ಷ ವೆಚ್ಚದಲ್ಲಿ 167 ಹೈ ಕ್ವಾಲಿಟಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಮಾನಿಟರ್ ಅಳವಡಿಸಿ, ಅಲ್ಲಿಂದಲೇ ಎಲ್ಲ ಕ್ಯಾಮೆರಾ ವೀಕ್ಷಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಅರ್ಹರಿಗೆ ವಸತಿ ಸೌಲಭ್ಯ: ನಗರದ ಏಳುರಾಗಿ ಕ್ಯಾಂಪ್ ಮತ್ತು ಮೂರುಮೈಲ್ ಕ್ಯಾಂಪಿನಲ್ಲಿ ವಾಸಿಸುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ನೀಡಲಾಗುವುದು. ಅಂಬೇಡ್ಕರ್ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಲ್ಲಿ 500 ಮನೆಗಳ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಸಾಮಾನ್ಯ ₹2.80 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹3.50 ಲಕ್ಷ ಸಹಾಯಧನ ನೀಡಲಾಗುವುದು. ಆದರೆ ಸಾಮಾನ್ಯ ಮತ್ತು ಎಸ್‌ಸಿ, ಎಸ್‌ಟಿ ಟಾರ್ಗೆಟ್‍ಗೆ ತಕ್ಕಂತೆ ಅರ್ಜಿಗಳು ಬಂದಿಲ್ಲ. ಮುಸ್ಲಿಮರಿಗೆ 50 ಮನೆಗಳ ನಿರ್ಮಾಣಕ್ಕೆ ಟಾರ್ಗೆಟ್ ಇದ್ದು, 190 ಅರ್ಜಿಗಳು ಬಂದಿವೆ. ಹೀಗಾಗಿ ಮುಸ್ಲಿಮರಿಗೆ ಹೆಚ್ಚುವರಿ ಅರ್ಜಿಗೆ ಅವಕಾಶ ನೀಡುವ ಕುರಿತು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಜೆಡಿಎಸ್ ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ, ಚಂದ್ರಶೇಖರ ಮೈಲಾರ, ಕೆ.ಹನುಮೇಶ, ಮುಖಂಡರಾದ ಅಶೋಕಗೌಡ ಗದ್ರಟಗಿ, ಚಂದ್ರುಭೂಪಾಲ ನಾಡಗೌಡ, ಎಂ.ಡಿ.ನದೀಮ್ ಮುಲ್ಲಾ, ಲಿಂಗರಾಜ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು