ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಅಶಕ್ತರ ಬಾಳಿನ ಆಶಾಕಿರಣ ಅಕ್ಬರ್ ಪಾಷಾ

Last Updated 25 ಜುಲೈ 2021, 19:30 IST
ಅಕ್ಷರ ಗಾತ್ರ

ಮಾನ್ವಿ: ಮಾನ್ವಿ ಪಟ್ಟಣದ ಸಿವಿಲ್ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.

ಅವರು ವೃದ್ಧರು ಹಾಗೂ ದುಡಿಯಲು ಶಕ್ತಿ ಇಲ್ಲದ ಅಶಕ್ತರಿಗೆ ವೈಯಕ್ತಿಕವಾಗಿ ಪ್ರತಿ ತಿಂಗಳು ₹ 400 ಸಹಾಯ ಧನವನ್ನು ಪಿಂಚಣಿ ರೂಪದಲ್ಲಿ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಅವರ ಈ ಸೇವೆಯಿಂದ ನೂರಾರು ಬಡ ವ್ಯಕ್ತಿಗಳಿಗೆ ಅನುಕೂಲವಾಗಿದೆ.

2015ರಿಂದ ಇವರಲ್ಲಿ ಪಿಂಚಣಿ ಪಡೆಯುವ ಫಲಾನುಭವಿಗಳ ಸಂಖ್ಯೆ 125 ಇತ್ತು. ಕಳೆದ ಒಂದು ವರ್ಷದಿಂದ 106 ಜನ ವಯೋವೃದ್ಧರು ಪ್ರತಿ ತಿಂಗಳು 1ನೇ ತಾರೀಖಿನ ದಿನದಂದು ₹ 400ಗಳನ್ನು ತಪ್ಪದೇ ಪಡೆಯುತ್ತಿದ್ದಾರೆ.

ಫಲಾನುಭವಿಗಳ ಪಟ್ಟಿಯಲ್ಲಿ ಸರ್ವ ಧರ್ಮಗಳಿಗೆ ಸೇರಿದ ವಯೋವೃದ್ಧರು, ವಿಧವೆಯರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಇದ್ದಾರೆ. ಮಾನ್ವಿ ಪಟ್ಟಣದ ಆದಾಪುರಪೇಟೆಯ ಬನ್ನಮ್ಮ ವೆಂಕಟೇಶ, ಸೋನಿಯಾ ನಗರದ ಹನುಮಂತ ಹಾಗೂ ಈರಮ್ಮ, ಜನತಾ ಕಾಲೊನಿಯ ಹನುಮನವ್ವ, ಲಕ್ಷ್ಮೀ ಲಕ್ಷ್ಮಣ, ಗೌರಿ ನಾಗರಾಜ ಮತ್ತಿತರರು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ.

ಆರ್ಥಿಕ ಸಮಸ್ಯೆ ಉಂಟಾದಾಗ ಹಾಗೂ ಚಿಕಿತ್ಸಾ ವೆಚ್ಚಗಳಿಗಾಗಿ ಅಕ್ಬರ್ ಪಾಷಾ ಅವರಿಂದ ನೆರವು ಪಡೆದ ಕಡುಬಡವರು ಕೂಡ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.

ದಶಕಗಳಿಂದ ಸಿವಿಲ್ ಗುತ್ತಿಗೆದಾರಾಗಿರುವ ಸೈಯದ್‌ ಅಕ್ಬರ್ ಪಾಷಾ ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾಸಂಸ್ಥೆಗಳ ಮೂಲಕ ಸ್ಥಳೀಯವಾಗಿ ಕೊಡುಗೈ ದಾನಿ ಎಂದು ಚಿರಪರಿಚಿತರಾಗಿದ್ದಾರೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರ ಚಿಕಿತ್ಸೆಗೆ ನೆರವು, ಬಡ ಕುಟುಂಬಗಳಿಗೆ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸಾವಿರಾರು ಸಂಖ್ಯೆಯಲ್ಲಿ ಆಹಾರದ ಪದಾರ್ಥಗಳ ಕಿಟ್‍ಗಳನ್ನು ವಿತರಿಸಿದ್ದಾರೆ.

‘ನನ್ನ ವೃತ್ತಿಯಲ್ಲಿನ ಆದಾಯದ ಸ್ವಲ್ಪ ಭಾಗವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಮೀಸಲಿಟ್ಟಿದ್ದೇನೆ. ವೃದ್ಧರು ಹಾಗೂ ಅಶಕ್ತರ ಸೇವೆಯಲ್ಲಿ ಬದುಕಿನ ಸಾರ್ಥಕ ಭಾವ ಕಾಣುತ್ತಿದ್ದೇನೆ’ ಎಂದು ಸೈಯದ್ ಅಕ್ಬರ್ ಪಾಷಾ ಹೇಳುತ್ತಾರೆ.

ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ವೈಯಕ್ತಿಕವಾಗಿ ಮಾಡುತ್ತಿರುವ ಸೈಯದ್ ಅಕ್ಬರ್ ಪಾಷಾ ಅವರ ಮಾನವೀಯ ಸೇವೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

***

ಕಡುಬಡವರು ಹಾಗೂ ವಯೋವೃದ್ಧರಿಗೆ ನೆರವಾಗುತ್ತಿರುವ ಕಾರ್ಯದಲ್ಲಿ ಹೆಚ್ಚು ತೃಪ್ತಿ, ಬದುಕಿನ ಸಾರ್ಥಕ ಭಾವ ಮೂಡಿಸಿದೆ.

-ಸೈಯದ್ ಅಕ್ಬರ್ ಪಾಷಾ , ಸಿವಿಲ್ ಗುತ್ತಿಗೆದಾರ, ಮಾನ್ವಿ

***

ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಕ್ಬರ್ ಪಾಷಾ ಅವರ ವ್ಯಕ್ತಿತ್ವ, ಸೇವಾ ಮನೋಭಾವ ಇತರರಿಗೆ ಮಾದರಿ.

-ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಕಲ್ಮಠ ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT