ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಬಿಸಿಲ ಧಗೆ: ಒಂದೇ ತಿಂಗಳಲ್ಲಿ 70,209 ಬಾಕ್ಸ್ ಬಿಯರ್‌ ಮಾರಾಟ

Published 16 ಮೇ 2024, 5:29 IST
Last Updated 16 ಮೇ 2024, 5:29 IST
ಅಕ್ಷರ ಗಾತ್ರ

ರಾಯಚೂರು: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಅತಿಹೆಚ್ಚು ಬಿಸಿಲು ಇರುವುದೇ ರಾಯಚೂರು ಜಿಲ್ಲೆಯಲ್ಲಿ. ಈ ಬಾರಿ ಎರಡು ತಿಂಗಳು ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇತ್ತು. ಬಿಸಿಲಿನ ಝಳಕ್ಕೆ ದೇಹವನ್ನು ತಂಪಾಗಿಸಿ ಇಟ್ಟುಕೊಳ್ಳುವುದೇ ಒಂದು ಸವಾಲಾಗಿತ್ತು. ಹೀಗಾಗಿ ಜಿಲ್ಲೆಯ ಮದ್ಯ ಪ್ರಿಯರು ದಾಖಲೆಯ ಬಿಯರ್ ಸೇವಿಸಿ ದೇಹ ತಂಪು ಮಾಡಿಕೊಂಡಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಕುಡಿದಷ್ಟು ಬಿಯರ್‌ ಅನ್ನು ಈ ವರ್ಷದ ಬೇಸಿಗೆಯಲ್ಲೇ ಕುಡಿದು ಜಿಲ್ಲೆಯಲ್ಲಿ ದಾಖಲೆ ಮಾಡಿದ್ದಾರೆ.

2023ರ ಜೂನ್‌ನಲ್ಲಿ 69,488 ಬಾಕ್ಸ್‌ಗಳು ಹಾಗೂ ಡಿಸೆಂಬರ್‌ನಲ್ಲಿ 62,164 ಬಿಯರ್‌ ಬಾಕ್ಸ್ ಮಾರಾಟವಾಗಿದ್ದವು. ಪ್ರಸಕ್ತ ವರ್ಷದ ಏಪ್ರಿಲ್‌ ತಿಂಗಳೊಂದರಲ್ಲೇ 70,209 ಬಾಕ್ಸ್ ಬಿಯರ್‌ ಬಾಕ್ಸ್‌ಗಳು ಮಾರಾಟವಾಗಿವೆ.

ಬಿಸಿಲಿನಿಂದಾಗಿ ಅನೇಕರು ತಂಪು ಪಾನೀಯ, ಎಳನೀರು ಸೇವನೆ ಮಾಡುವುದು ಸಹಜ. ಆದರೆ , ಈ ಬಾರಿ ಮದ್ಯ ಪ್ರಿಯರ ಮೊದಲ ಆಯ್ಕೆ ಬಿಯರ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಸಿಗೆಯಲ್ಲಿ ನಿರೀಕ್ಷೆಯಷ್ಟು ಮದ್ಯ ಮಾರಾಟವಾಗಿಲ್ಲ. ಮದ್ಯ ಸೇವಿಸುವವರೂ ಬಿಯರ್‌ ಮೊರೆ ಹೋಗಿದ್ದಾರೆ. ಆದರೆ ಬಿಯರ್ ಕುಡಿಯುವವರ ಸಂಖ್ಯೆ 2023 ಕ್ಕಿಂತ 2024ರಲ್ಲಿ ಹೆಚ್ಚು ಇದೆ. 

ಮಾನ್ವಿ, ರಾಯಚೂರು ಹಾಗೂ ದೇವದುರ್ಗ ತಾಲ್ಲೂಕು ರಾಯಚೂರು ಡಿ‍ಪೊ ವ್ಯಾಪ್ತಿಯಲ್ಲಿವೆ. ಮೂರು ತಾಲ್ಲೂಕುಗಳಲ್ಲಿ ಏಪ್ರಿಲ್‌ನಲ್ಲಿ ಒಟ್ಟು 94,957 ಬಾಕ್ಸ್ ಮದ್ಯ ಹಾಗೂ 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. 2023ರ ಏಪ್ರಿಲ್‌ನಲ್ಲಿ 94,896 ಬಾಕ್ಸ್ ಮದ್ಯ ಹಾಗೂ 46,553 ಬಾಕ್ಸ್ ಬಿಯರ್ ಮಾರಾಟವಾಗಿತ್ತು.  

ಜಿಲ್ಲೆಯಲ್ಲಿ ಫೆಬ್ರುವರಿಯಿಂದಲೇ ರಣ ಬಿಸಿಲು ಕಾಣಸಿಕೊಂಡಿದೆ. ಹೀಗಾಗಿ ಮದ್ಯಪ್ರಿಯರು ಬಾರ್ ಮತ್ತು ರೆಸ್ಟೋರೆಂಟ್‌ಗಿಂತ ಹೊಲ ಹಾಗೂ ಗುಡ್ಡಗಾಡು, ಅರಣ್ಯ ಪ್ರದೇಶಗಳಿಗೆ ತಂಡೋಪತಂಡವಾಗಿ ತೆರಳಿ ಮದ್ಯ ಪಾನ ಮಾಡುವುದು ಸಾಮಾನ್ಯವಾಗಿದೆ. 2024ರ ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಅನುಕ್ರಮವಾಗಿ 63,464, 62,679 ಹಾಗೂ 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. 1,10,527, 1,03,888 ಹಾಗೂ 94957 ಬಾಕ್ಸ್ ಮದ್ಯ ಮಾರಾಟವಾಗಿದೆ.  2023ರಲ್ಲಿ ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ನಲ್ಲಿ ಅನುಕ್ರಮವಾಗಿ 47,379, 62,417, 58,190, ಏಪ್ರಿಲ್ 46553 ಹಾಗೂ ಮೇನಲ್ಲಿ 53,965 ಬಿಯರ್ ಮಾರಾಟವಾಗಿತ್ತು. 

ಕಳೆದ ಡಿಸೆಂಬರ್ ನಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ 1,25,497 ಗರಿಷ್ಠ ಮದ್ಯ ಹಾಗೂ 62,164 ಬಿಯರ್ ಬಾಕ್ಸ್ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ರಾಯಚೂರು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ಕಾರಣ ಪಕ್ಕದ ರಾಜ್ಯಗಳ  ಮದ್ಯ ಇಲ್ಲಿ ಕಡಿಮೆ ದರದಲ್ಲಿ ದೊರೆಯುತ್ತಿದೆ.

ಮತ್ತೊಂದೆಡೆ ಹೊರ ರಾಜ್ಯದಿಂದ ಕಲಬೆರಕೆ ಮದ್ಯವು ಅಲ್ಲಲ್ಲಿ ಮಾರಾಟವಾಗುತ್ತದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಮದ್ಯ ಬಿಟ್ಟು ಬಿಯರ್‌ ಸೇವಿಸಿದ್ದಾರೆ ಎಂದು ಪಾನಪ್ರಿಯರು ವಿಶ್ಲೇಷಿಸುತ್ತಾರೆ.

‘ಯಾವುದೇ ಮದ್ಯ ಸೇವನೆ ಹಾನಿಕಾರಕ ಹೌದು. ಆದರೆ ಬಿಯರ್‌ನಲ್ಲಿ ಕಡಿಮೆ ಪ್ರಮಾಣದ ಅಲ್ಕೋಹಾಲ್ ಇರುವ ಕಾರಣ ಹಾಗೂ ಅದರಲ್ಲೂ ಬೇಸಿಗೆಯಲ್ಲಿ ಬಿಯರ್‌ ಕುಡಿಯುವ ಟ್ರೆಂಡ್‌ ರಾಯಚೂರು ಜಿಲ್ಲೆಯಲ್ಲಿ ಇದೆ. ಇದೇ ಬಿಯರ್‌ ಮಾರಾಟ ಹೆಚ್ಚಾಗಲು ಕಾರಣ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ರಮೇಶ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT