ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತ್ರಿ’ ಕಾಮಗಾರಿಗಳಲ್ಲಿ ಅಕ್ರಮ: ಕ್ರಮಕ್ಕೆ ಶಿಫಾರಸ್ಸು

ಉದ್ಯೋಗ ಖಾತ್ರಿ ತೋಟಗಾರಿಕೆ ಇಲಾಖೆ ಅನುಷ್ಠಾನಾಧಿಕಾರಿ ನಿರ್ಲಕ್ಷ್ಯ: ಆರೋಪ
ಅಕ್ಷರ ಗಾತ್ರ

ಲಿಂಗಸುಗೂರು: ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಆರೋಪದ ಸಂಬಂಧ ಸಾಮಾಜಿಕ ಲೆಕ್ಕ ಪರಿಶೋಧನ ವಿಭಾಗ ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಶಿಫಾರಸ್ಸು ಮಾಡಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆ 2019-20ನೇ ಸಾಲಿನ ಮೊದಲ ಮತ್ತು ಎರಡನೇ ಹಂತದ ಹಾಗೂ 2020-21ನೇ ಸಾಲಿನ ಮೊದಲ ಹಂತದಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಹಿರಿಯ ಅಧಿಕಾರಿಗಳ ಸೂಚನೆ ಆಧರಿಸಿ ತನಿಖೆ ನಡೆಸಲಾಗಿದೆ ಎಂದು ಉಲ್ಲೇಖ ಪತ್ರದಲ್ಲಿ ವಿವರಿಸಿದ್ದಾರೆ.

ತಾಲ್ಲೂಕಿನ ಗೊರೆಬಾಳ, ಕಾಳಾಪುರ, ಮಾವಿನಭಾವಿ, ಸರ್ಜಾಪುರ, ಆನೆಹೊಸೂರು ಗ್ರಾಮ ಪಂಚಾಯಿತಿಗಳಲ್ಲಿ 167 ಕಾಮಗಾರಿ ಅನುಷ್ಠಾನಗೊಂಡಿವೆ. ಸಾಮಾಜಿಕ ಪರಿಶೋಧನ ತಂಡ 144 ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಇನ್ನು 18 ಕಾಮಗಾರಿಗಳ ಕಡತ ನೀಡಿರುವುದಿಲ್ಲ. ಆದರೆ, 167 ಕಾಮಗಾರಿಗಳ ಪೈಕಿ ಕೇವಲ 16 ಕಾಮಗಾರಿಗಳ ಸ್ಥಳಗಳನ್ನು ತೋರಿಸಿದ್ದಾರೆ.

ಎಂ.ಬಿ ಪ್ರತಿ ನಿರ್ವಹಣೆ ಕೊರತೆ, 8 ಮತ್ತು 9ನೇ ನಮೂನೆ ನಿರ್ವಹಣೆ ಮಾಡಿಲ್ಲ. ಆಡಳಿತ ಮತ್ತು ತಾಂತ್ರಿಕ ಮಂಜೂರಾತಿ ಪಡೆದ ದಾಖಲೆಗಳಿಲ್ಲ. ಮೂರು ಹಂತದ ಕಾಮಗಾರಿ ಭಾವಚಿತ್ರಗಳ ಸಂಗ್ರಹಣೆ ಇರುವುದಿಲ್ಲ. ಕಾಮಗಾರಿ ಆರಂಭದ ಅನುಮತಿ, ಮುಕ್ತಾಯ ಪ್ರಮಾಣ ಪತ್ರ, ಅಂದಾಜು ಪತ್ರಿಕೆ, ಚೆಕ್‍ ಮೇಸರ್‌ಮೆಂಟ್‌ ಇಲ್ಲದಿರುವ ಬಗ್ಗೆ ಈಗಾಗಲೆ ವರದಿ ಸಲ್ಲಿಕೆಯಾಗಿದೆ.

‘ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ಆಧರಿಸಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅವರ ಆದೇಶ ಮೇರೆಗೆ ಗೊರೆಬಾಳ ಮತ್ತು ಆನೆಹೊಸೂರು ಮೊದಲ ಹಂತದ ಕಾಮಗಾರಿಗಳ ಖುದ್ದು ಪರಿಶೀಲನೆ ನಡೆಸಿರುವೆ. ನೀರಾವರಿ ಸೌಲಭ್ಯವಿಲ್ಲದ ಜಮೀನಲ್ಲಿ ಕಾಮಗಾರಿ ಅನುಷ್ಠಾನಗೊಳಿಸಿದ್ದು ಅಲ್ಲಿ ಸಸಿಗಳು ಇರುವುದಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಅವರು ವರದಿಯಲ್ಲಿ ತಿಳಿಸಿದ್ದಾರೆ.

‘ಸಾಮಾಜಿಕ ಪರಿಶೋಧನ ತಂಡದ ವರದಿ ಆಧರಿಸಿ ತನಿಖೆ ನಡೆಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರದಿಯನ್ನೂ ಆಧರಿಸಿ ಹಿರಿಯ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು. ದಶಕದಿಂದ ಸಾಮಾಜಿಕ ಪರಿಶೋಧನ ತಂಡ ಆಗಾಗ ಸಲ್ಲಿಸುತ್ತ ಬಂದಿರುವ ವರದಿಗಳ ತನಿಖೆ ಕೈಗೆತ್ತಿಕೊಳ್ಳಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆಗ್ರಹಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT