ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಕ್ತಿನಗರ: ಜಾನುವಾರುಗಳಿಗೆ ‘ನರೇಗಾ ನೆರಳು’

₹57 ಸಾವಿರ ಸಹಾಯಧನದಲ್ಲಿ ದನದ ಶೆಡ್‌ ನಿರ್ಮಾಣ
ಉಮಾಪತಿ ರಾಮೋಜಿ
Published 8 ಫೆಬ್ರುವರಿ 2024, 6:22 IST
Last Updated 8 ಫೆಬ್ರುವರಿ 2024, 6:22 IST
ಅಕ್ಷರ ಗಾತ್ರ

ಶಕ್ತಿನಗರ: ಗ್ರಾಮೀಣ ಭಾಗದ ರೈತರ ಕೃಷಿ ಕೆಲಸಕ್ಕೆ ಮಾತ್ರವಲ್ಲದೆ ಕೃಷಿ ಪೂರಕ ಚಟುವಟಿಕೆ, ಜಾನುವಾರು ಸಾಕಣೆ, ದನದ ಶೆಡ್‌ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಆಸರೆಯಾಗಿದೆ.

4 ಎಕರೆ ಜಮೀನು ಹೊಂದಿದ ಬಿ.ಹನುಮಾಪೂರು ಗ್ರಾಮದ ರೈತ ಬಸಪ್ಪ ಅವರು ಎರಡು ಆಕಳು, ಎರಡು ಎತ್ತುಗಳನ್ನು ಸಾಕಿದ್ದಾರೆ. ಅವುಗಳನ್ನು ಮನೆ ಮುಂದಿನ ಖಾಲಿ ಜಾಗದಲ್ಲಿ ಕಟ್ಟುತ್ತಿದ್ದರು. ತನ್ನ ಜಾನುವಾರುಗಳಿಗೆ ಸೂರು ಒದಗಿಸಬೇಕು ಎಂದುಕೊಂಡಿದ್ದರೂ ಆರ್ಥಿಕ ಪರಿಸ್ಥಿತಿಯಿಂದ ಸಾಧ್ಯವಾಗಿರಲಿಲ್ಲ.

ಜಾನುವಾರುಗಳ ರಕ್ಷಣೆಗಾಗಿ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಈ ಮೊದಲು ₹19,500 ಸಹಾಯಧನ ಸಿಗುತ್ತಿತ್ತು. ಈಗ ಪರಿಷ್ಕೃತ ಆದೇಶದಂತೆ ಎಲ್ಲ ವರ್ಗದವರಿಗೆ ₹57 ಸಾವಿರ ಸಹಾಯಧನ ನೀಡಲಾಗುತ್ತಿದೆ. ‌ಈ ಬಗ್ಗೆ ಮಾಹಿತಿ ಪಡೆದ ರಾಯಚೂರು ತಾಲ್ಲೂಕಿನ ಹೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಹನುಮಾಪೂರು ಗ್ರಾಮದ ಬಸಪ್ಪ ಮತ್ತು ಗೋವಿಂದ ಅವರು ದನದ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.

10 ಅಡಿ ಅಗಲ, 18 ಅಡಿ ಉದ್ದ, 5 ಅಡಿ ಎತ್ತರದ ಗೋಡೆ ಸೇರಿದಂತೆ ಜಾನುವಾರುಗಳಿಗೆ ಮೇವು ತಿನ್ನಲು ಗೋದಲಿ, ಕಾಂಕ್ರೀಟ್ ಬೆಡ್, ತಗಡಿನ ಶೀಟ್‌ ಹಾಕಿ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದಾರೆ.

‘ಉದ್ಯೋಗ ಖಾತರಿ ಯೋಜನೆಯಡಿ ದನಗಳಿಗೆ ಕೊಟ್ಟಿಗೆ ನಿರ್ಮಿಸಿಕೊಂಡಿದ್ದೇವೆ. ಈಗಾಗಲೇ ಕೂಲಿ ಮೊತ್ತ ತಲಾ ₹7 ಸಾವಿರ ಬಂದಿದೆ. ಸಾಮಗ್ರಿ ಮೊತ್ತ ತಲಾ ₹50 ಸಾವಿರ ಬರಬೇಕು’ ಎಂದು ರೈತರಾದ ಬಸಪ್ಪ ಮತ್ತು ಗೋವಿಂದ ಹೇಳಿದರು.

‘ವೈಯಕ್ತಿಕ ಕಾಮಗಾರಿಗಳ ಅನುದಾನದಡಿ ಉತ್ತಮವಾದ ಜಾನುವಾರು ಕೊಟ್ಟಿಗೆ ನಿರ್ಮಾಣದಿಂದ ರೈತ‌ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT