ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಪೆಕ್‌ ಆಸ್ಪತ್ರೆಗೆ ಹೊರೆಯಾದ ಸೋಂಕಿತರ ವ್ಯವಸ್ಥೆ

ಕೋವಿಡ್‌ ವಾರ್ಡ್‌ಗಳಲ್ಲಿ ಅಶುಚಿತ್ವ, ಅಸಮರ್ಪಕ ನಿರ್ವಹಣೆ
Last Updated 17 ಮೇ 2021, 15:43 IST
ಅಕ್ಷರ ಗಾತ್ರ

ರಾಯಚೂರು: ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಸಮಸ್ಯೆ ಎದುರಿಸುತ್ತಿರುವ ನಗರದ ಓಪೆಕ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗಳು ಅವ್ಯವಸ್ಥೆಯ ಆಗರಗಳಾಗಿ ಮಾರ್ಪಡುತ್ತಿದ್ದು, ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳಿಗೆ ವ್ಯವಸ್ಥೆ ಮಾಡುವುದು ಹೊರೆಯಾಗುತ್ತಿದೆ.

ಸೋಂಕು ತಗುಲಿದವರಿಗೆ ಧೈರ್ಯ ಮೂಡಿಸುವ ನೆಲೆಯಾಗಿದ್ದ ಓಪೆಕ್‌ ಅಸ್ಪತ್ರೆಯು ಇದೀಗ ಅಶುಚಿತ್ವ ಮತ್ತು ವೈದ್ಯಕೀಯ ಆರೈಕೆ ಕೊರತೆಯಾಗಿ ರೋಗಿಗಳು ಬದುಕಬೇಕೆನ್ನುವ ಭರವಸೆ ಕ್ಷಿಣಿಸಲು ಕಾರಣವಾಗುತ್ತಿದೆ. ವಾರ್ಡ್‌ ಶೌಚಾಲಯಗಳು ಹಾಗೂ ವಾರ್ಡ್‌ಗಳಲ್ಲಿ ನಿಯಮಿತವಾಗಿ ಸ್ವಚ್ಛತೆ ಆಗುತ್ತಿಲ್ಲ. ಇದರಿಂದ ವಾರ್ಡ್‌ಗಳೆಲ್ಲವೂ ದುರ್ನಾತ ಹರಡಿಕೊಳ್ಳುತ್ತಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿರುವುದರಿಂದ ವೈದ್ಯಕೀಯ ಸಿಬ್ಬಂದಿಯು ಎಲ್ಲರತ್ತ ಗಮನ ಹರಿಸುವುದು ವಾಸ್ತವದಲ್ಲಿ ಸಾಧ್ಯವಾಗುತ್ತಿಲ್ಲ. ರೋಗಿಗಳ ಸಂಬಂಧಿಗಳೇ ಸೋಂಕು ತಗಲಿದವರ ಆರೈಕೆಗೆ ಮುಂದಾಗುತ್ತಿದ್ದಾರೆ.

‘ಕಳೆದ ವರ್ಷ ದಾಖಲಾಗುತ್ತಿದ್ದ ಕೋವಿಡ್‌ ರೋಗಿಗಳ ಸಂಖ್ಯೆಗಳಿಗೆ ಹೋಲಿಸಿದರೆ ಈ ಸಲ ವಿಪರೀತ ಒತ್ತಡ ನಿರ್ಮಾಣವಾಗಿದೆ. ಪರಿಸ್ಥಿತಿ ಸಹಜವಾಗಿಲ್ಲ. ಮಹಾಮಾರಿ ತಡೆಯುವುದಕ್ಕೆ ಈಗಿರುವ ವ್ಯವಸ್ಥೆ ಸಾಕಾಗುತ್ತಿಲ್ಲ. ಹಾಸಿಗೆಗಳನ್ನು ಹೆಚ್ಚಳ ಮಾಡಲಾಗಿದ್ದು, ನಿರ್ವಹಣೆಗೆ ಬೇಕಾಗುವ ಸಿಬ್ಬಂದಿ ಸಿಗುತ್ತಿಲ್ಲ. ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ರಿಮ್ಸ್‌ ಆಸ್ಪತ್ರೆಯಲ್ಲೇ ಕೋವಿಡ್‌ ಹಾಸಿಗೆಗಳು ದುಪ್ಪಟ್ಟಾಗಿವೆ. ಹೊಸದಾಗಿ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಇನ್ನೂ ನೇಮಕ ಆಗಿಲ್ಲ’ ಎಂದು ಹೆಸರು ಬಹಿರಂಗಗೊಳಿಸಲಿಚ್ಛಿಸದ ಆಸ್ಪತ್ರೆಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಗಿ ಸಂಬಂಧಿಕರು ವಾರ್ಡ್‌ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕುವುದು ಸಾಮಾನ್ಯವಾಗಿದೆ. ಆಮ್ಲಜನಕ ಸರಿಯಾದ ಸಮಯಕ್ಕೆ ಒದಗಿಸುತ್ತಿಲ್ಲ. ರೆಮಿಡಿಸಿವರ್‌ ಚುಚ್ಚುಮದ್ದು ಇಲ್ಲ, ವೈದ್ಯರು ದಿನಕ್ಕೊಮ್ಮೆಯೂ ನೋಡುತ್ತಿಲ್ಲ. ರೋಗಿಗಳು ನರಳುತ್ತಿದ್ದರೂ ಗಮನಿಸುವುದಕ್ಕೆ ಸಿಬ್ಬಂದಿ ಇಲ್ಲ ಎನ್ನುವ ಅಳಲು ಹೊರಹಾಕುತ್ತಿದ್ದಾರೆ. ವಾರ್ಡ್‌ ಒಳಗಿನ ಸ್ಥಿತಿಯನ್ನು ಮೊಬೈಲ್‌ನಲ್ಲಿ ಚಿಕ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸುವುದು ಸಾಮಾನ್ಯವಾಗಿದೆ.

ಕೋವಿಡ್‌ ವಾರ್ಡ್‌ ಪರಿಶೀಲನೆಗಾಗಿ ಬರುವ ಅಧಿಕಾರಿಗಳು ಮತ್ತು ಸಚಿವರು ರಿಮ್ಸ್‌ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುತ್ತಿದ್ದಾರೆ. ಅವ್ಯವಸ್ಥೆಯಿಂದ ಕೂಡಿರುವ ಓಪೆಕ್‌ ಆಸ್ಪತ್ರೆಯತ್ತ ಬರುತ್ತಿಲ್ಲ ಎನ್ನುವುದು ಜನರ ಆರೋಪ. ಕೋವಿಡ್‌ ಮೃತರಾದವರ ಶವಗಳನ್ನು ಪ್ಯಾಕಿಂಗ್‌ ಮಾಡಲು ಬಳಸು ಪ್ಲಾಸ್ಟಿಕ್‌ ಖಾಲಿಯಾಗಿದ್ದು, ಸ್ಥಳೀಯ ಪ್ಲಾಸ್ಟಿಕ್‌ನಲ್ಲೇ ವೈದ್ಯರು ಪ್ಯಾಕಿಂಗ್‌ ಮಾಡುತ್ತಿದ್ದರೆ ಎನ್ನುವ ಆರೋಪ ಕೇಳಿಬಂದಿತ್ತು.

‘ಶವಗಳನ್ನು ಪ್ಯಾಕಿಂಗ್‌ ಮಾಡಲು ಬೇಕಾಗುವ ಪ್ಲಾಸ್ಟಿಕ್‌ಗೆ ಕೊರತೆಯಿಲ್ಲ. ಆದರೆ, ಮುಖ ಕಾಣಿಸುವಂತೆ ಪ್ಯಾಕಿಂಗ್‌ ಮಾಡುವುದಕ್ಕೆ ರೋಗಿ ಸಂಬಂಧಿಗಳು ಒತ್ತಾಯ ಮಾಡುತ್ತಿದ್ದಾರೆ. ಒಂದು ಪ್ಯಾಕಿಂಗ್‌ ಮಾಡಿದ್ದ ಶವವನ್ನು ಸಂಬಂಧಿಗಳು ಬೆಡ್‌ಸಿಟ್‌ನಲ್ಲಿ ಎತ್ತಿಕೊಂಡು ಹೋಗುತ್ತಿದ್ದಾಗ ಚಿತ್ರ ತೆಗೆದು ವದಂತಿ ಹರಡಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT