ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾ ಮನೋಭಾವದವರಿಗೆ ಎನ್‌ಎಸ್‌ಎಸ್‌ ಉತ್ತಮ’

ಓರಿಯೆಂಟೇಶನ್ ಕಾರ್ಯಕ್ರಮ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ
Last Updated 5 ಜನವರಿ 2023, 13:30 IST
ಅಕ್ಷರ ಗಾತ್ರ

ರಾಯಚೂರು: ಸಮರ್ಪಣಾ ಮನೋಭಾವದಿಂದ ಸಲ್ಲಿಸುವ ಸೇವೆ ಹಾಗೂ ಶ್ರೇಷ್ಠವಾದುದನ್ನು ಸಾಧಿಸುವ ಛಲ, ಶೃದ್ಧೆ ಹಾಗೂ ಉತ್ಸಾಹ ಹೊಂದಿರುವ ವಿದ್ಯಾರ್ಥಿನಿ ಸ್ವಯಂ ಸೇವಕಿಯರಿಗೆ ರಾಷ್ಟ್ರೀಯ ಸೇವಾ ಯೋಜನೆಯು ಅವಕಾಶಗಳ ಗುಚ್ಚವಿದ್ದಂತೆ ಎಂದು ರಾಯಚೂರಿನ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಬಿ.ಭರತ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ನೂತನವಾಗಿ ನೋಂದಾಯಿಸಿಕೊಂಡ ಸ್ವಯಂಸೇವಕಿಯರಿಗಾಗಿ ಗುರುವಾರ ಆಯೋಜಿಸಿದ್ದ ಓರಿಯೆಂಟೇಶನ್ ಕಾರ್ಯಕ್ರಮ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರತಿ ವಿದ್ಯಾರ್ಥಿನಿ ಸ್ವಯಂ ಸೇವಕಿಯೂ ಶ್ರಮವಹಿಸಿ ಪ್ರಯತ್ನಿಸಬೇಕು. ಸೇವೆ ಎಂಬುದು ಆಂತರ್ಯದಿಂದ ಬರವಂಥದ್ದೇ ಹೊರತು ತೋರ್ಪಡಿಕೆಗಾಗಿ ಮಾಡುವಂಥದ್ದಲ್ಲ ಎಂದು ತಿಳಿಸಿದರು.

ದೇಶದ ಮಹಾನ್ ವ್ಯಕ್ತಿಗಳೆಲ್ಲ ತಮ್ಮ ಸಾಮಾಜಿಕ ಹಾಗೂ ರಾಷ್ಟ್ರೀಯ ಸೇವೆಗಳ ಕಾರಣದಿಂದಾಗಿಯೇ ಮಹಾನ್ ವ್ಯಕ್ತಿಗಳು ಎಂದು ಕರೆಯಿಸಿಕೊಂಡಿದ್ದಾರೆ. ಸಾಧನೆಯ ಛಲವುಳ್ಳವರಿಗೆ ಸಾಧನೆಯ ಮಾರ್ಗಗಳು ವಿಫಲವಾಗಿವೆ. ಉತ್ತಮವಾದದನ್ನು ಗುರುತಿಸಿ, ಆ ಮೂಲಕ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸುವುದೇ ವಿದ್ಯಾರ್ಥಿನಿಯರಲ್ಲಿ ಇರಬೇಕಾದ ಉತ್ಕೃಷ್ಟ ಸ್ವಭಾವ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯು ಸಾಮಾಜಿಕ ಹಾಗೂ ರಾಷ್ಟ್ರೀಯ ಸೇವಾ ಆಕಾಂಕ್ಷೆಯಿಂದ 1969 ರ ಸೆಪ್ಟೆಂಬರ್ 24 ರಂದು ಜಾರಿಗೆ ಬಂದಿದ್ದು, ಅಂದಿನಿಂದಲೂ ದೇಶದಲ್ಲಿ ಮಹತ್ವದ ಬದಲಾವಣೆಗಳನ್ನು ತರವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹಾಗೆ ಕಂಡುಕೊಂಡಂತಹ ಎಲ್ಲಾ ಬದಲಾವಣೆಗಳಿಗೂ ಅದರ ಸ್ವಯಂಸೇವಕರೇ ಮೂಲ ಕಾರಣ ಎಂದು ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿ ದೇವರಾಜ್ ಮಾತನಾಡಿ, ಕಾಲೇಜು ಮಟ್ಟದಿಂದ ಆರಂಭಗೊಂಡು ರಾಷ್ಟ್ರೀಯ ಮಟ್ಟದವರೆಗೂ ವಿವಿಧ ಹಂತಗಳಲ್ಲಿ ಇರುವ ಅವಕಾಶಗಳು ಹಾಗೂ ಅವುಗಳನ್ನು ಪಡೆಯುವ ಬಗೆಯ ಕುರಿತಾಗಿ ಮಾಹಿತಿ ನೀಡಿದರು.

ಕಾಲೇಜಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಸುಗುಣ ಬಸವರಾಜ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಘಟಕಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯೂ ಒಂದಾಗಿದೆ. ತನ್ನ ಧ್ಯೇಯೋದ್ದೇಶದಂತೆ ಸಮಾಜ ಕೇಂದ್ರಿತ ಮತ್ತು ರಾಷ್ಟ್ರೀಯ ಸೇವಾ ಕಾರ್ಯಕ್ರಮಗಳ ಆಯೋಜನೆ ಮೂಲಕ ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಕ್ಕಾಗಿ ಶ್ರಮಿಸುತ್ತಿದೆ. ಹಾಗಾಗಿ ಪ್ರತಿ ಚಟುವಟಿಕೆಯಲ್ಲೂ ಎಲ್ಲ ವಿದ್ಯಾರ್ಥಿನಿಯರು ಭಾಗಿಯಾಗುವ ಮೂಲಕ ಅನುಭವ ಜನ್ಯ ಜ್ಞಾನವನ್ನು ಸಂಪಾದಿಸಲು ಆಸಕ್ತಿ ವಹಿಸಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಧ್ಯಾಪಕರಾದ ಡಾ. ಮೆಹಬೂಬ್ ಅಲಿ ಮತ್ತು ಡಾ. ಜ್ಯೋತಿ ಸಿ.ಕೆ., ಪ್ರೊ. ಉಮಾದೇವಿ, ಡಾ. ಸ್ವರೂಪರಾಣಿ, ಡಾ. ಮಲ್ಲಯ್ಯ, ಪ್ರೊ. ರಂಗನಾಥ್, ಪ್ರೊ. ಭೀಮಶಂಕರ್, ಪ್ರೊ. ಶರಣಗೌಡ ಇದ್ದರು.

ಸ್ವಯಂಸೇವಕಿ ಸುನಿತಾ ಸ್ವಾಗತಿಸಿದರು. ಹಾಗೂ ಪಲ್ಲವಿ ವಂದಿಸಿದರು. ಮಮತಾ ಪರಿಚಯಿಸಿದರು. ಶ್ರೇಯ ಹಾಗೂ ಅಮೃತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT