ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕೇರಾ ತಾಲ್ಲೂಕು ಘೋಷಣೆಗೆ ವಿರೋಧ

ಅಖಂಡ ತಾಲ್ಲೂಕು ಉಳಿವಿಗಾಗಿ ರ್‍ಯಾಲಿ
Last Updated 15 ಅಕ್ಟೋಬರ್ 2020, 5:32 IST
ಅಕ್ಷರ ಗಾತ್ರ

ದೇವದುರ್ಗ: ಅರಕೇರಾ ಗ್ರಾಮವನ್ನು ಈಚೆಗೆ ಹೊಸ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮತ್ತು ಅಖಂಡ ದೇವದುರ್ಗ ತಾಲ್ಲೂಕು ಉಳಿವಿಗೆ ಒತ್ತಾಯಿಸಿ ಅಖಂಡ ದೇವದುರ್ಗ ತಾಲ್ಲೂಕು ಐಕ್ಯ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.

ಬುಧವಾರ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಬೃಹತ್ ಜನಾಕ್ರೋಶ ರ್‍ಯಾಲಿ ನಡೆಸುವ ಮೂಲಕ ವಿವಿಧ ಸಂಘಟನೆಗಳ ಸಾವಿರಾರು ಜನ ಮುಖಂಡರು ಧರಣಿ ಕುಳಿತು ಪ್ರತಿಭಟಿಸಿದರು.

‘ಅಖಂಡ ತಾಲ್ಲೂಕು ಉಳಿದರೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಜೀವನ ಪದ್ಧತಿ ಉಳಿಯಲಿದೆ. ಸ್ಥಳೀಯ ಶಾಸಕ ಕೆ.ಶಿವನಗೌಡ ನಾಯಕ ಅವರು ತಮ್ಮ ಸ್ವಗ್ರಾಮ ಅರಕೇರಾವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿ ಕೊಂಡಿರುವುದು ಅವೈಜ್ಞಾನಿಕ ವಾಗಿದ್ದು, ಸರ್ಕಾರ ಈ ಕೂಡಲೇ ಮರು ಪರಿಶೀಲಿಸಬೇಕೆಂದು‘ ಒತ್ತಾಯಿಸಿದರು.

ಸರ್ಕಾರ ಅರಕೇರಾ ಗ್ರಾಮವನ್ನು ತಾಲ್ಲೂಕು ಎಂದು ಘೋಷಣೆ ಮಾಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಅದರಂತೆ ಜಾಲಹಳ್ಳಿ ಮತ್ತು ಗಬ್ಬೂರು ಹೊಸ ತಾಲ್ಲೂಕು ರಚನೆಗಾಗಿ ಈಗಾಗಲೇ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದು, ಸರ್ಕಾರ ಯಾವುದಕ್ಕೂ ಅವಕಾಶ ನೀಡದೆ ಅಖಂಡ ದೇವದುರ್ಗ ತಾಲ್ಲೂಕು ಮುಂದುವರಿಯುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್, ತಾ.ಪಂ ಸದಸ್ಯ ಗೋವಿಂದರಾಜ್ ನಾಯಕ, ಜೆಡಿಎಸ್ ಮುಖಂಡರಾದ ಕರೆಮ್ಮ ಗೋಪಾಲಕೃಷ್ಣಾ, ಹನುಮಂತ್ರಾಯ ಮಟ್ಲ, ಶಿವರಾಜ ನಾಯಕ, ಹನುಮಂತ್ರಾಯ ಚಿಕ್ಕಗುಡ್ಡ, ಶಿವಪ್ಪ ಮಲಕನಮರಡಿ, ಭೀಮರಾಯ ಜರದಬಂಡಿ, ಜಿ.ಬಸವರಾಜ ನಾಯಕ, ಪ್ರಭಾಕರ ಪಾಟೀಲ್, ರಂಗಪ್ಪ ಗೋಸಲ್, ಹೈದರ್ ಅಲಿ, ಶಿವರಾಜ ನಾಯಕ ಕೊತ್ತದೊಡ್ಡಿ, ಭೂತಪ್ಪ ದೇವರಮನಿ, ಸಾಬಣ್ಣ ಕಮಲದಿನ್ನಿ, ಬೂದಯ್ಯ ಸ್ವಾಮಿ, ನಾಗರಾಜ ಜಂಬಲದಿನ್ನಿ, ವೆಂಕಟೇಶ, ಗಿರಿಲಿಂಗಸ್ವಾಮಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT