ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ, ಮೆಣಸಿನಕಾಯಿ ಬೆಳೆದ ರೈತರ ಪರದಾಟ

ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮೊರೆ
Last Updated 24 ಮೇ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ ಹಾಗೂ ಮೆಣಸಿನಕಾಯಿ ಕೊಯ್ಲು ಮುಗಿದಿದ್ದು, ಕೃಷಿ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ದೊರಕದೆ ರೈತರು ಪರದಾಡುವಂತಾಗಿದೆ.

ಜಮೀನುಗಳಲ್ಲಿ ಕೊಯ್ಲು ಮುಗಿಸಿ ರಾಶಿ ಹಾಕಿರುವ ಭತ್ತವು ಸಕಾಲದಲ್ಲಿ ಮಾರಾಟವಾಗದೆ ಮೊಳಕೆ ಒಡೆಯುತ್ತಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ಕೃಷಿ ಉತ್ಪನ್ನ ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಸಿಲಿಗೆ ಒಣ ಹಾಕಬೇಕಿದ್ದ ಭತ್ತ ಹಾಗೂ ಮೆಣಸಿನಕಾಯಿಯನ್ನು ಟಾರ್‌ಪೈಲ್‌ನಿಂದ ಮುಚ್ಚಿರುವುದರಿಂದ ಉತ್ಪನ್ನವು ಮೂಲಗುಣ ಕಳೆದುಕೊಳ್ಳಲಾರಂಭಿಸಿದೆ.

ಅಕ್ಕಿ ಗಿರಣಿ ಮಾಲೀಕರು ನೇರವಾಗಿ ರೈತರಿಂದ ಭತ್ತ ಖರೀದಿಸುವುದಕ್ಕೆ ಅವಕಾಶವಿದೆಹಾಗೂ ಬೆಂಬಲ ಬೆಲೆಯಲ್ಲಿ ಭತ್ತ ಮಾರಾಟ ಮಾಡಬಹುದು ಎನ್ನುವ ಆದೇಶಗಳು ಕಡತಗಳಿಗೆ ಸಿಮೀತವಾಗಿವೆ. ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಬಿಗಿಗೊಳಿಸಲಾಗಿದೆ. ಹೀಗಾಗಿ ಅಕ್ಕಿ ಗಿರಣಿ ಮಾಲೀಕರು ಗ್ರಾಮಗಳತ್ತ ಹೋಗಲಾಗುತ್ತಿಲ್ಲ. ರೈತರು ಭತ್ತವನ್ನು ಅಕ್ಕಿ ಗಿರಣಿಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ.

ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರಲಿ ಎನ್ನುವ ಕಾರಣದಿಂದ ರೈತರು ಮೌನದಿಂದ ಅನಿವಾರ್ಯವಾಗಿ ನಷ್ಟ ಅನುಭವಿಸುತ್ತಿದ್ದಾರೆ. ದೇವದುರ್ಗ, ಸಿರವಾರ, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳಲ್ಲಿ ಭತ್ತ ಬೆಳೆದು, ಮಾರಾಟಕ್ಕಾಗಿ ಕಾಯುತ್ತಿರುವ ರೈತರು ಬಹಳಷ್ಟಿದ್ದಾರೆ.

ಲಾಕ್‌ಡೌನ್‌ ಸಂದರ್ಭವನ್ನು ಅವಕಾಶ ಮಾಡಿಕೊಂಡಿರುವ ಕೆಲವು ಅಕ್ಕಿ ಗಿರಣಿ ಮಾಲೀಕರು, ಪ್ರತಿ ಕ್ವಿಂಟಲ್‌ ಭತ್ತವನ್ನು ₹1,400 ರಿಂದ ₹1,600 ದರಕ್ಕೆ ರೈತರಿಂದ ಕೇಳುತ್ತಿದ್ದಾರೆ. ಹಾಗೇ ಉಳಿದರೆ ನಷ್ಟ ಅನುಭವಿಸುವ ಆತಂಕದಲ್ಲಿರುವ ಕೆಲವು ರೈತರು ರಾತ್ರೋರಾತ್ರಿ ಭತ್ತವನ್ನು ಗಿರಣಿಗಳಿಗೆ ತಲುಪಿಸುತ್ತಿದ್ದಾರೆ. ಭತ್ತದ ದರವು ಪ್ರತಿ ಕ್ವಿಂಟಲ್‌ಗೆ ಮಾರುಕಟ್ಟೆಯಲ್ಲಿ ₹2 ಸಾವಿರ ಮೇಲ್ಪಟ್ಟಿದೆ. ಮೆಣಸಿನಕಾಯಿ ಮಾರಾಟಕ್ಕೆ ಮಾರುಕಟ್ಟೆ ಇಲ್ಲದೆ, ಕೆಲವು ಶ್ರೀಮಂತ ರೈತರು ಕೋಲ್ಡ್‌ ಸ್ಟೋರೆಜ್‌ಗಳಿಗೆ ಸಾಗಿಸುತ್ತಿದ್ದಾರೆ. ಆದರೆ, ಬಡ ರೈತರು ಸಹಜ ದಿನಗಳಿಗಾಗಿ ಕಾಯುತ್ತಿದ್ದಾರೆ.

ಜೂನ್‌ನಿಂದ ಮುಂಗಾರು ಆರಂಭವಾಗುತ್ತಿದ್ದು, ಬಿತ್ತನೆಗಾಗಿ ಭೂಮಿ ಹದ ಮಾಡಿಕೊಳ್ಳಬೇಕಿದೆ. ಆದರೆ, ಭತ್ತ, ಮೆಣಸಿನಕಾಯಿ ಮಾರಾಟವಾಗದೆ ಕೃಷಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಆಗುವುದಿಲ್ಲ ಎಂದು ರೈತರು ಅಸಹಾಯಕಯಿಂದ ಕುಳಿತಿದ್ದಾರೆ. ಬೀಜ, ಗೊಬ್ಬರ ಹಾಗೂ ಬೆಳೆ ನಿರ್ವಹಣೆಗಾಗಿ ಪಡೆದಿರುವ ಸಾಲ ಮರಳಿಸುವ ಒತ್ತಡ ಒಂದು ಕಡೆಯಾದರೆ, ಮತ್ತೆ ಬೀಜ, ಗೊಬ್ಬರ ಖರೀದಿಸಲು ಹಣ ಹೊಂದಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT