ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಬೆಂಕಿಯಲ್ಲಿ ಸುಟ್ಟಂತೆ ಒಣಗಿದ ಭತ್ತದ ಬೆಳೆ

ಮಂಜುನಾಥ ಎನ್‌.ಬಳ್ಳಾರಿ
Published 6 ಫೆಬ್ರುವರಿ 2024, 5:34 IST
Last Updated 6 ಫೆಬ್ರುವರಿ 2024, 5:34 IST
ಅಕ್ಷರ ಗಾತ್ರ

ಕವಿತಾಳ: ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಭತ್ತದ ಗದ್ದೆಗಳು ಸಂಪೂರ್ಣ ಒಣಗಿ ಹಳದಿ ಬಣ್ಣಕ್ಕೆ ತಿರುಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಸಮೀಪದ ಮಲ್ಲದಗುಡ್ಡ, ಮಲ್ಲದಗುಡ್ಡ ಕ್ಯಾಂಪ್, ಸೂಸೈಟಿ ಕ್ಯಾಂಪ್ ಸೇರಿದಂತೆ ವಿವಿಧೆಡೆ ನೂರಾರು ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಗೆ ಕೆರೆ, ಕೃಷಿ ಹೊಂಡ ಮತ್ತಿತರ ನೀರಿನ ಮೂಲ ಬಳಸಿಕೊಂಡು ಭತ್ತ ಬೆಳೆದ ರೈತರಿಗೆ ದಿಕ್ಕು ತೋಚದಂತಾಗಿದೆ.

ಮಳೆ ಕೊರತೆಯಿಂದ ತುಂಗಭದ್ರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಪೂರೈಕೆ ಸ್ಥಗಿತವಾಗಿದೆ. ರೈತರು ಜಮೀನುಗಳಲ್ಲಿ ನಿರ್ಮಿಸಿಕೊಂಡ ಕೆರೆಗಳಲ್ಲಿ ಸಂಗ್ರಹಿಸಿದ ನೀರು ಬಳಸಿಕೊಂಡು ನೂರಾರು ಎಕರೆ ಜಮೀನುಗಳಲ್ಲಿ ಎರಡು ತಿಂಗಳ ಹಿಂದೆ ಭತ್ತ ನಾಟಿ ಮಾಡಿದ್ದಾರೆ.

ಇನ್ನೂ ಒಂದೂವರೆ ತಿಂಗಳಲ್ಲಿ ಬೆಳೆ ಕೈಸೇರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಬೆಳೆ ಒಣಗುತ್ತಿರುವುದು ಅಚ್ಚರಿಯ ಜತೆಗೆ ಆತಂಕ ಉಂಟು ಮಾಡಿದೆ.

‘ಕಳೆದ ಎರಡು ತಿಂಗಳ ಹಿಂದೆ ಕಾವೇರಿ ಸೋನಾ ಭತ್ತದ ಸಸಿ ನಾಟಿ ಮಾಡಿದ್ದೇವೆ. ಸಂಪ್ರದಾಯದಂತೆ ನೀರು ಹಾಯಿಸುವುದು ಮತ್ತು ಎಲ್ಲಾ ರೀತಿಯ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆ ನಾಶಕ ಸೇರಿದಂತೆ ಮಾಮೂಲಿ ಪದ್ದತಿಯಂತೆ ಬೆಳೆ ಆರೈಕೆ ಮಾಡಿದ್ದೇವೆ. ಆದರೆ ಒಂದು ವಾರದಿಂದ ಈಚೆಗೆ ಬೆಳೆ ಒಣಗಲು ಆರಂಭಿಸಿದ್ದು ಸದ್ಯ ಬೆಂಕಿಯಲ್ಲಿ ಸುಟ್ಟಂತೆ ಒಣಗಿ ಕಡ್ಡಿಯಂತೆ ನಿಂತಿವೆ. ಹತ್ತಾರು ವರ್ಷಗಳಿಂದ ಭತ್ತ ಬೆಳೆಯುತ್ತಿದ್ದೇವೆ. ಗದ್ದೆಗಳಲ್ಲಿ ಈ ರೀತಿಯ ದೃಶ್ಯ ಕಂಡುಬಂದಿಲ್ಲ. ಇದು ವಿಚಿತ್ರ ಎನಿಸುತ್ತಿದೆ’ ಎಂದು ರೈತರಾದ ಕೆ.ನಾಗೇಶ್ವರರಾವ್, ಸುಬ್ಬರಾವ್, ಬಾಲಾಜಿ, ಗೋಪಾಲಕೃಷ್ಣ ಮತ್ತು ಶಂಕರಗೌಡ ಸೈದಾಪುರ ಹೇಳಿದರು.

‘ಈ ಬಗ್ಗೆ ಹಲವು ರೈತರು ಮಾಹಿತಿ ನೀಡುತ್ತಿದ್ದು ಹಿರಿಯ ಅಧಿಕಾರಿಗಳು ಈಗಾಗಲೇ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ, ರೈತರು ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕುʼ ಎಂದು ಸಹಾಯಕ ಕೃಷಿ ಅಧಿಕಾರಿ ಮಾರುತಿ ನಾಯಕ ಹೇಳಿದರು.

ಅಂದಾಜು 20 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದೇನೆ. ಪ್ರತಿ ಎಕರೆಗೆ ₹30ರಿಂದ ₹35 ಸಾವಿರ ಖರ್ಚು ತಗುಲಿದೆ. ಈಗ ಬೆಳೆ ಒಣಗಿರುವುದು ನಷ್ಟ ಅನುಭವಿಸುವಂತಾಗಿದೆ.
ಕೆ.ವಾಸು ಮಲ್ಲದಗುಡ ಕ್ಯಾಂಪ್‌ ರೈತ
ಮಳೆ ಕೊರತೆಯಿಂದ ಮಳೆಗಾಲದ ಬೆಳೆಯ ಇಳುವರಿ ಕಡಿಮೆ ಬಂದಿದೆ. ಈಗ ಬೇಸಿಗೆ ಬೆಳೆ ಕೈಕೊಟ್ಟಿದ್ದು ತೀವ್ರ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
ಬಿ.ವೆಂಕಟೇಶ, ಮಲ್ಲದಗುಡ್ಡ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT