ರಾಯಚೂರು: ‘ಹಬ್ಬಗಳು ಮತ್ತು ಆಚರಣೆಗಳು ಮನುಷ್ಯರ ಪ್ರಗತಿಗೆ ಪೂರಕವಾಗಿ ಇರಬೇಕು ಹೊರತು ಮೌಢ್ಯತೆಯಿಂದ ಕೂಡಿರಬಾರದು. ನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಪೌಷ್ಟಿಕವಾದ ಹಾಲು ಹಾಳು ಮಾಡದೆ ಅಗತ್ಯವಿದ್ದವರಿಗೆ ಹಂಚಿದಾಗ ಮಾತ್ರ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ‘ ಎಂದು ರಾಯಚೂರು ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಹೇಳಿದರು.
ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೊನಿಯ ಸಮುದಾಯ ಭವನದಲ್ಲಿ, ಬಸವ ಕೇಂದ್ರ, ಅಕ್ಕನ ಬಳಗ ಮತ್ತು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಬಸವ ಪಂಚಮಿ ಪ್ರಯುಕ್ತ ಬಡ ಮಕ್ಕಳಿಗೆ ಹಾಲು ಮತ್ತು ಹಣ್ಣು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಬಡ ಮಕ್ಕಳಿಗೆ, ಬಾಣಂತಿಯರಿಗೆ, ಗರ್ಭಿಣಿಯರಿಗೆ ಹಾಗೂ ವಯೋವೃದ್ಧರಿಗೆ ಹಾಲು ಕೊಡುವ ಮೂಲಕ ಹಬ್ಬವನ್ನು ಆಚರಿಸಬೇಕು‘ ಎಂದು ಮನವಿ ಮಾಡಿದರು.
ಬಸವ ಕೇಂದ್ರದ ಕಾರ್ಯದರ್ಶಿ ಶಿವಕುಮಾರ್ ಮಾಟೂರ್ ಅವರು ಮಾತನಾಡುತ್ತಾ, ಪ್ರತಿವರ್ಷ ಬಸವ ಕೇಂದ್ರದ ವತಿಯಿಂದ ನಗರದಲ್ಲಿ ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ ಅರ್ಥಪೂರ್ಣವಾಗಿ ವೈಚಾರಿಕ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ‘ ಎಂದರು.
‘ಹಬ್ಬದ ದಿನ ಲಕ್ಷಾಂತರ ಲೇಟರ್ ಹಾಲು ಮತ್ತು ತುಪ್ಪವನ್ನು ಕಲ್ಲು ಮತ್ತು ಹುತ್ತದ ನಾಗರಕ್ಕೇ ಸುರಿದು ಪೋಲು ಮಾಡುತ್ತಿದ್ದಾರೆ. ಹಾವು ಸಸ್ಯಹಾರಿ ಪ್ರಾಣಿಯಲ್ಲ, ಅದು ಒಂದು ಮಾಂಸಾಹಾರಿ ಜೀವಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದ್ದರು ಜನರು ಹಾಲನ್ನು ಹಾವಿಗೆ ಸುರಿದು ಅದಕ್ಕೆ ಆರೋಗ್ಯ ಹಾನಿ ಉಂಟು ಮಾಡುತ್ತಿದ್ದಾರೆ’ ಎಂದರು.
‘ಕಲ್ಲು ಮತ್ತು ಮಣ್ಣಿನ ನಾಗರಕ್ಕೆ ಹಾಲು ಸುರಿಯುವುದರ ಬದಲು ಬಾಣಂತಿಯರಿಗೆ, ಮಹಿಳೆಯರಿಗೆ, ಚಿಕ್ಕ ಮಕ್ಕಳಿಗೆ ಕೊಟ್ಟು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಬೇಕು’ ಎಂದು ಹೇಳಿದರು.
ಮಕ್ಕಳ ತಜ್ಞ ಡಾ. ಮಲ್ಲೇಶಪ್ಪ, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ಸಿಬ್ಬಂದಿ, ಜಿಲ್ಲಾ ಆರೋಗ್ಯ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ, ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ, ಜನತಾ ಕಾಲೊನಿಯ ಗರ್ಭಿಣಿಯರು ಬಾಣಂತಿಯರು, ವೃದ್ಧರು ಮತ್ತು ಮಕ್ಕಳಿಗೆ ಹಾಲು ಮತ್ತು ಹಣ್ಣು ವಿತರಿಸಲಾಯಿತು. ಪಾರ್ವತಿ ಪಾಟೀಲ ಪ್ರಾರ್ಥನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.