ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಮೀಸಲಾತಿ ಹೆಸರಲ್ಲಿ ಪರಿಶಿಷ್ಟರಿಗೆ ಅನ್ಯಾಯ: ಆರೋ‍ಪ

ಹಿಂದಿನ ಸರ್ಕಾರದಿಂದ ಸದಾಶಿವ ಆಯೋಗದ ವರದಿ ರದ್ದು
Published 2 ಜನವರಿ 2024, 16:02 IST
Last Updated 2 ಜನವರಿ 2024, 16:02 IST
ಅಕ್ಷರ ಗಾತ್ರ

ರಾಯಚೂರು: ‘ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿ ವಿವಾದ ನಿರಂತರವಾಗಿ ಮುಂದುವರಿಯಬೇಕು ಎನ್ನುವ ದುರುದ್ದೇಶದಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನೇ ರದ್ದು ಮಾಡಿದೆ. ಮೀಸಲಾತಿ ಪ್ರಮಾಣ ಶೇಕಡ 50ರಷ್ಟು ಮೀರಬಾರದು ಎನ್ನುವ ಆದೇಶವಿದ್ದರೂ ಪ್ರಮಾಣವನ್ನು ಹೆಚ್ಚಿಸಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ’ ಎಂದು ಡಾ.ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರಕುಮಾರ ಮಿತ್ರಾ ಆರೋಪ ಮಾಡಿದರು.

ಹಿಂದಿನ ಸರ್ಕಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ದಲಿತ ಸಂಘಟನೆಗಳಿಗೆ ಹಾಗೂ ಮೀಸಲಾತಿ ವರ್ಗೀಕರಣಕ್ಕೆ ಬೆಂಬಲ ನೀಡಿದ ಛಲವಾದಿ ಸಂಘಟನೆಗಳಿಗೆ ವ್ಯವಸ್ಥಿತ ರೀತಿಯಲ್ಲಿ ಅನ್ಯಾಯ ಮಾಡಿದೆ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಒಳ ಮೀಸಲಾತಿಯ ಶಿಫಾರಸು ಮಾಡಿ ಪರಿಶಿಷ್ಟರಿಗೆ ಪಂಗನಾಮ ಹಾಕಿ ಮೀಸಲಾತಿ ವರ್ಗೀಕರಣದ ವಿಷಯವನ್ನೇ ಅಂತ್ಯಗೊಳಿಸಿದೆ’ ಎಂದು ಹೇಳಿದರು.

‘ವಾಸ್ತವದಲ್ಲಿ ಸಂವಿಧಾನದ ಅನುಚ್ಛೇದ 341(2) ಪ್ರಕಾರ ಪರಿಶಿಷ್ಟ ಜಾತಿಯಲ್ಲಿ ವರ್ಗೀಕರಣಕ್ಕೆ ಅವಕಾಶವೇ ಇಲ್ಲ. ಆಂಧ್ರಪ್ರದೇಶದ ಇ.ವಿ.ಚಿನ್ನಯ್ಯ ಪ್ರಕರಣದಲ್ಲಿ ಸಂತೋಷ ಹೆಗ್ಡೆ ನೇತೃತ್ವದ ಐದು ಸದಸ್ಯರನ್ನೊಳಂಡ ಸಂವಿಧಾನ ಪೀಠ ಹಾಗೂ ಪಂಜಾಬ್‌ದ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಅರುಣ ಮಿಶ್ರಾ ನೇತೃತ್ವದ 5 ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ನೀಡಿರುವ ಅಭಿಪ್ರಾಯ ಉಲ್ಲೇಖಿಸಿ ಗೊಂದಲ ನಿವಾರಿಸಲು 7 ನ್ಯಾಯಾಧೀಶರ ಒಳಗೊಂಡ ಪೀಠಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.

‘ವರ್ಗೀಕರಣದ ವಾದ ಮಂಡಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ವರ್ಗೀಕರಣ ವಿಷಯದ ವಿಚಾರಣೆಗೆ 2024ರ ಜನವರಿ 17ರಂದು ದಿನಾಂಕ ನಿಗದಿಪಡಿಸಿದ್ದಾರೆ. ನಿಜವಾದ ಪರಿಶಿಷ್ಟರಿಗೆ ಆದ ಅನ್ಯಾಯವನ್ನು ಸುರ್ಪೀಂಕೋರ್ಟ್‌ಗೆ ಮನವರಿಕೆ ಮಾಡಲಾಗುವುದು’ ಎಂದು ಹೇಳಿದರು.

‘1980ರಲ್ಲಿ ಕಾಂಗ್ರೆಸ್‌ ಪಕ್ಷವು ಒಬಿಸಿಗೆ ಸೇರಿದ ಲಂಬಾಣಿ, ವಡ್ಡರ್, ಕೊರಚ ಹಾಗೂ ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ನಿಜವಾದ ಪರಿಷ್ಠರ ಸಂಪೂರ್ಣ ಮೀಸಲಾತಿ ದಕ್ಕದಂತೆ ಮಾಡಿದ್ದಾರೆ’ ಎಂದು ದೂರಿದರು.

‘ಸಂವಿಧಾನದ ಪರಿಶಿಷ್ಟ ಜಾತಿಗಳ ಆದೇಶದಲ್ಲಿರುವ ಪ್ಯಾರಾ 03 ಪ್ರಕಾರ ಹಿಂದೂ ಅಸ್ಪೃಶ್ಯರಿಗೆ ಮೀಸಲಾತಿ ಪಡೆಯುವ ಅವಕಾಶ ಇದೆ. ಮೇಲ್ವರ್ಗದವರು, ಕ್ರೈಸ್ತ ಮತ್ತು ಬುದ್ಧ ಧರ್ಮ ಪಾಲನೆ ಮಾಡುವವರೂ ಎಸ್‌ಸಿ ಪ್ರಮಾಣಪತ್ರ ಪಡೆದು ಸಂವಿಧಾನಕ್ಕೆ ಮೋಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಡಾ.ಅಂಬೇಡ್ಕರ್‌ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ನಂತರ ಪರಿಶಿಷ್ಟರ ಸವಲತ್ತು ಪಡೆಯಲಿಲ್ಲ. ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕರ್ನಾಟಕದಲ್ಲಿ ಅನೇಕರು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಸೌಲಭ್ಯ ಕಬಳಿಸಿದ್ದಾರೆ. ಆದರೂ ಕರ್ನಾಟಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮೌನವಹಿಸಿದೆ. ಎಫ್‌ಐಆರ್‌ ದಾಖಲು ಮಾಡಿಕೊಳ್ಳಲು ಅಧಿಕಾರವಿಲ್ಲದ ಇಂತಹ ಸಂಸ್ಥೆಯನ್ನು ರದ್ದು ಮಾಡಬೇಕು ಅಥವಾ ಅದಕ್ಕೆ ಪೂರ್ಣ ಅಧಿಕಾರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಮತದಾರರು ಒಳ್ಳೆಯ ಜ್ಞಾನವಿರುವ ಅರ್ಹ ವ್ಯಕ್ತಿಯನ್ನು ಶಾಸನಸಭೆಗೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ಆಶಯಗಳೇ ಈಡೇರುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT