ಭಾನುವಾರ, ಜೂನ್ 20, 2021
23 °C
ಪಿಯು ವಿಜ್ಞಾನ ಪ್ರವೇಶಕ್ಕೆ ಚಾಂದ್‌ಪಾಷಾಗೆ ಅಗತ್ಯವಿದೆ ನೆರವು

ರಾಯಚೂರು: ಪೇಪರ್‌ಬಾಯ್‌ಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 76 ಅಂಕ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Chand Pasha

ರಾಯಚೂರು: ಕಡುಬಡತನ ಸವಾಲು ಎದುರಿಸಲು ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತಲೇ ಕಷ್ಟಪಟ್ಟು ಓದುತ್ತಿರುವ ನಗರ ವ್ಯಾಪ್ತಿಯ ಅಸ್ಕಿಹಾಳ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಚಾಂದ್‌ಪಾಷಾ, ಎಸ್ಸೆಸ್ಸೆಲ್ಸಿಯಲ್ಲಿ 428 ಶೇ 76.48 ಅಂಕಗಳನ್ನು ಪಡೆದಿರುವುದು ವಿಶೇಷ.

ರಾಯಚೂರಿನ ಟ್ಯಾಗೋರ್‌ ಮೆಮೊರಿಯಲ್‌ ಪ್ರೌಢಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದು, ಬಡತನ ಇದ್ದರೂ ಉತ್ತಮ ಅಂಕ ಪಡೆದಿರುವುದಕ್ಕೆ ಶಿಕ್ಷಕರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ 82, ಕನ್ನಡ 73, ಹಿಂದಿ 47, ಗಣಿತ 81, ವಿಜ್ಞಾನ 71 ಹಾಗೂ ಸಮಾಜ ವಿಜ್ಞಾನದಲ್ಲಿ 74 ಅಂಕಗಳು ಬಂದಿವೆ.

ಚಾಂದ್‌ಪಾಷಾ ಅವರ ತಂದೆ ಖದೀರ್‌ಷಾ ಅವರು ಗುಜರಿ ವ್ಯಾಪಾರಿ. ತಾಯಿ ಖಾಸಿಂಬೀ ಗೃಹಿಣಿ. ತಳ್ಳುಗಾಡಿಯಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಆಗುತ್ತಿದೆ. ತಂದೆಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಚಾಂದ್‌ಪಾಷಾ ಕೂಡಾ ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದಾನೆ.

ಪಿಯುಸಿ ವಿಜ್ಞಾನ ಓದುವ ಬಯಕೆ ಇಟ್ಟುಕೊಂಡಿರುವ ಚಾಂದ್‌ಪಾಷಾಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸಾಲ ಮಾಡಿಯಾದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಛಲ ಪಾಲಕರದ್ದು. ಖದೀರ್‌ಷಾ ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಅವರಲ್ಲಿ ಚಾಂದ್‌ಪಾಷಾ ಕಿರಿಯ. 

‘ಬಡತನ ಇರುವುದರಿಂದ ಮನೆ ಕಟ್ಟಿಕೊಳ್ಳುವುದಕ್ಕೆ ಆಗಿಲ್ಲ. ಟಿನ್‌ಶೆಡ್‌ನಲ್ಲಿ ವಾಸಿಸುತ್ತಿದ್ದೇವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಕಷ್ಟಪಡುತ್ತಿದ್ದೇನೆ. ಎಲ್ಲರೂ ಓದುತ್ತಿದ್ದಾರೆ. ಹಿರಿಯಮಗ ಈ ವರ್ಷ ಎಂಜಿನಿಯರಿಂಗ್‌ ಮುಗಿಸಿದರೂ ಉದ್ಯೋಗ ಸಿಕ್ಕಿಲ್ಲ. ಸ್ಥಳೀಯವಾಗಿ ಸಣ್ಣ ಕೆಲಸ ಮಾಡಿಕೊಂಡಿದ್ದಾನೆ. ಗುಜರಿ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದೇವೆ. ಚಾಂದ್‌ಪಾಷಾ ಕಠಿಣ ಪರಿಶ್ರಮ ಮಾಡುತ್ತಿದ್ದಾನೆ. ಮುಂದೆ ಓದುವುದಕ್ಕೆ ಸರ್ಕಾರದಿಂದ ಏನಾದರೂ ಸಹಾಯ ಮಾಡಿದರೆ ಅನುಕೂಲ ಆಗುತ್ತದೆ’ ಎಂದು ಖದೀರ್‌ಷಾ ಹೇಳಿದರು.

‘ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಅರ್ಧಗಂಟೆ ಓದುವ ರೂಢಿ ಮಾಡಿಕೊಂಡಿದ್ದೆ. 5.30 ರ ನಂತರ ಹೊಸೂರ ಗ್ರಾಮಕ್ಕೆ ಹೋಗಿ ದಿನಪತ್ರಿಕೆ ಹಂಚುತ್ತೇನೆ. ಅದರಿಂದ ಆರ್ಥಿಕವಾಗಿ ಸ್ವಲ್ಪ ಸಹಾಯ ಆಗುತ್ತಿದೆ. ಓದುವುದಕ್ಕೆ ಬಹಳ ಆಸಕ್ತಿ ಇದೆ. ಪಿಯುಸಿ ವಿಜ್ಞಾನ ಮಾಡುವ ಆಸೆ ಇದೆ. ಪರಿಸ್ಥಿತಿ ತಕ್ಕಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎನ್ನುವ ಅಭಿಮತ ಚಾಂದ್‌ಪಾಷಾನದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು