ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಾ ಜಮೀನು ಪರಭಾರೆ ಅವ್ಯವಹಾರ: ತನಿಖೆಗೆ ಸೂಚನೆ

ಬಿ.ಎ. ನಂದಿಕೋಲಮಠ
Published 11 ಫೆಬ್ರುವರಿ 2024, 5:32 IST
Last Updated 11 ಫೆಬ್ರುವರಿ 2024, 5:32 IST
ಅಕ್ಷರ ಗಾತ್ರ

ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಐತಿಹಾಸಿಕ ಜಲದುರ್ಗ ಜಹಗೀರಿ ಪಟ್ಟಾ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಪರಭಾರೆ ಮಾಡುತ್ತಿರುವ ಕುರಿತಂತೆ ಪ್ರಜಾವಾಣಿ ಸರಣಿ ವರದಿ ಆಧರಿಸಿ ಅವ್ಯವಹಾರ ತನಿಖೆ ನಡೆಯಿಸಿ ತಿಂಗಳಲ್ಲಿ ವರದಿ ಸಲ್ಲಿಸಲು ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍ ಸೂಚಿಸಿದ್ದಾರೆ.

’ಜಹಗೀರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ’ ಹಾಗೂ ‘ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ’ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ತಹಶೀಲ್ದಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ನೋಂದಣಾಧಿಕಾರಿ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿ ತುರ್ತು ಸಭೆ ಕರೆದು ಚರ್ಚಿಸಿ 1963 ರಿಂದ 2024 ಫೆಬ್ರುವರಿ ವರೆಗಿನ ಪಹಣಿ ಆಧರಿಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದಾರೆ.

1955ರ ಪಹಣಿ ದಾಖಲೆ ಪ್ರಕಾರ ಜಲದುರ್ಗದ 1 ರಿಂದ 15 ಸರ್ವೆ ನಂಬರ್‌ನ 2,263 ಎಕರೆ ಜಮೀನು ಜಹಗೀರದಾರ ಆಗಿದ್ದ ದೇವದೀನ ನಾಥೂರಾಮ್‍ ಕುಟುಂಬದವರ ಹೆಸರಿಗೆ ಸೇರಿತ್ತು. ಬಳಿಕ ಟೋಂಚು, ಟಿಪ್ಪಣಿ, ಆಕಾರಬಂದ್‍, ಖಾಸ್ರಾ ಕಹಣಿ, ಫಾರ್ಮ್‍ ನಂಬರ್‍ ಟೆನ್‍(10) ಸೇರಿದಂತೆ ಯಾವುದೇ ದಾಖಲೆಗಳು ಇಲ್ಲದಿದ್ದರು ಸಹ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡುತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಸಭೆ ಗಮನ ಸೆಳೆದರು.

‘ಗ್ರಾಮದಲ್ಲಿ ಸರ್ವೆ ನಂಬರ್‌ 1 ರಿಂದ 15ರ ವರೆಗೆ ಜಮೀನುಗಳಿರುವುದು ನಿಜ. ಈ ಜಮೀನುಗಳಿಗೆ ಹಿಸ್ಸಾ ನಕಾಶೆ, ಗಟ್ಟಿ ಪ್ಲಾಟ್‍, ಪೋಡಿ ಪುಸ್ತಕ ಸೇರಿದಂತೆ ಟೋಂಚು, ಟಿಪ್ಪಣಿ, 11ಇ ದಾಖಲೆಗಳು ಲಭ್ಯವಿಲ್ಲ. ಮೂಲ ನೀಲನಕ್ಷೆಗೂ, ಆಕಾರ ಬಂದ್ ಮತ್ತು ಪಹಣಿ ಮಾಲಿಕತ್ವಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಗುಮಾನೆ ಇದೆ’ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮಲ್ಲಯ್ಯ ಹಿರೇಮಠ ಸಭೆಗೆ ತಿಳಿಸಿದರು.

ಜಲದುರ್ಗಕ್ಕೆ ಸಂಬಂಧಿಸಿ ಹಿಸ್ಸಾ ನಕಾಸೆ, 11ಇ, ಪೋಡಿ ಪುಸ್ತಕ, ಪಹಣಿ ಹೊಂದಾಣಿಕೆ ಇತರೆ ಸಮಸ್ಯೆಗಳಿದ್ದರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರತಿಯೊಂದು ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡುತ್ತಿರುವ ಬಗ್ಗೆ ಉಪ ವಿಭಾಗಾಧಿಕಾರಿಗಳು ಗಮನ ಸೆಳೆದರು. ಕಾವೇರಿಯಲ್ಲಿ ಭೂಮಿ ಡೆಟಾ ಪೂರ್ತಿ ಜಮೀನಿಗೆ ನೋಂದಣಿಗೆ ಇದ್ದರೆ ಮಾಡುತ್ತೇವೆ. ನಕಲಿ, ಅಸಲಿ ನಮಗೆ ಸಂಬಂಧಿಸಿದ್ದಲ್ಲ ಎಂದು ಉಪ ನೋಂದಣಾಧಿಕಾರಿ ಪ್ರಲ್ಹಾದ ಸ್ಪಷ್ಟಪಡಿಸಿದ್ದಾರೆ.

ಸುದೀರ್ಘ ಚರ್ಚೆಯ ಬಳಿಕ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಆಡಳಿತಾಧಿಕಾರಿಗಳು ಒಟ್ಟಾಗಿ ಭೂ ನ್ಯಾಯ ಮಂಡಳಿ ಆದೇಶ ಕಡತಗಳು, ಆಕಾರ ಬಂದ, ಪೋಡಿ, ಹಿಸ್ಸಾ, ಯಾವ ಆಧಾರದಲ್ಲಿ ವರ್ಗಾವಣೆಗೊಂಡಿವೆ, ಪಹಣಿ ಹೊಂದಾಣಿಕೆ ಸೇರಿದಂತೆ ಆಗಿರುವ ಲೋಪಗಳ ಸಮಗ್ರ ವರದಿ ಪಹಣಿಗಳ ಸಮೇತ ಸಲ್ಲಿಕೆಗೆ ಉಪ ವಿಭಾಗಾಧಿಕಾರಿ ತಿಂಗಳ ಗಡವು ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT