ಭಾನುವಾರ, ಸೆಪ್ಟೆಂಬರ್ 15, 2019
30 °C
ಪಿಂಚಣಿ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಶರತ್‌ ಬಿ. ಸೂಚನೆ

ಸಕಾಲಕ್ಕೆ ಪಿಂಚಣಿ ಸೌಲಭ್ಯ ಇಲಾಖೆಗಳ ಕರ್ತವ್ಯ

Published:
Updated:
Prajavani

ರಾಯಚೂರು: ಸರ್ಕಾರಿ ಸೇವೆಯಿಂದ ವಯೋನಿವೃತ್ತಿಗೊಂಡವರಿಗೆ ಸಕಾಲದಲ್ಲಿ ಪಿಂಚಣಿ ಸೌಲಭ್ಯ ಒದಗಿಸಿಕೊಡುವುದು ಎಲ್ಲಾ ಇಲಾಖೆಗಳ ಕರ್ತವ್ಯವಾಗಿದೆ ಜಿಲ್ಲಾಧಿಕಾರಿ ಶರತ್ ಬಿ. ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪಿಂಚಣಿ ಹಾಗೂ ಸಣ್ಣ ಉಳಿತಾಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಉದ್ಘಾಟಿಸಿ ಮಾತನಾಡಿದರು.

ನೌಕರರು ನಿವೃತ್ತಿಯಾದ ನಂತರ ಅವರಿಗೆ ಸಲ್ಲಿಸಬೇಕಾದ ಪಿಂಚಣಿಯನ್ನು ವಿಳಂಬಕ್ಕೆ ಆಸ್ಪದವಿಲ್ಲದಂತೆ ನೀಡುವ ಎಲ್ಲಾ ಪ್ರಕ್ರಿಯೆಗಳನ್ನು ಜಾರಿಗೊಳಿಸಬೇಕು ಆಯಾ ಇಲಾಖೆಗಳ ಮುಖ್ಯಸ್ಥರು ಮಾಡಬೇಕು ಎಂದರು.

ನಿವೃತ್ತಿ ನಂತರದ ನೆಮ್ಮದಿ ಬದುಕಿಗೆ ಸರ್ಕಾರ ಪಿಂಚಣಿ ವ್ಯವಸ್ಥೆ ಕಲ್ಪಿಸಿದೆ. ಇದನ್ನು ನಿವೃತ್ತರಿಗೆ ಸಕಾಲಕ್ಕೆ ನೀಡಬೇಕು. ಈ ದಿಸೆಯಲ್ಲಿ ನಿವೃತ್ತರ ದಾಖಲಾತಿಗಳನ್ನು ಮಹಾಲೇಖಾಪಾಲಕರಿಗೆ ಸಲ್ಲಿಸಲು ನಿವೃತ್ತಿಗೂ ಮುನ್ನ ಪೂರ್ವಭಾವಿಯಾಗಿ ಸಿದ್ದಪಡಿಸಬೇಕು. ಯಾವುದೇ ಅಗತ್ಯ ದಾಖಲೆಗಳು ಲಭ್ಯವಿಲ್ಲದಿದ್ದರೆ ಇಲಾಖಾ ಮುಖ್ಯಸ್ಥರು ಜವಾಬ್ದಾರಿಯಿಂದ ಅವುಗಳನ್ನು ಸಂಬಂಧಿಸಿದವರಿಂದ ಪಡೆಯಬೇಕು. ಅದು ಅವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

 ಜಿಲ್ಲೆಯ ಪಿಂಚಣಿದಾರರಿಗೆ ತಮ್ಮ ಪಿಂಚಣಿ ಪಡೆಯಲು ಯಾವುದೇ ಸಮಸ್ಯೆ ಕಂಡುಬಂದಲ್ಲಿ ನೇರವಾಗಿ ಕರೆಮಾಡಿ ಅಥವಾ ಕಿರುಸಂದೇಶ ಕಳುಹಿಸಿದರೆ, ಸ್ಪಂದಿಸುವುದಾಗಿ ಹೇಳಿದರು.

ಸಮಸ್ಯೆಗಳನ್ನು ತಿಳಿಸಿದ್ದಲ್ಲಿ ಸಂಬಂಧಿಸಿದ ಇಲಾಖೆ ಆ ಬಗ್ಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಲಾಗುವುದು. ಜಿಲ್ಲೆಯ ನಿವೃತ್ತಿದಾರರ ಸಮಸ್ಯೆಗಳನ್ನು ಬಗೆಹರಿಸಲು ಪಿಂಚಣಿ ಹಾಗೂ ಸಣ್ಣ ಉಳಿತಾಯ ಇಲಾಖೆ, ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಜಿಲ್ಲಾ ಖಜಾನಾಧಿಕಾರಿಗಳ ಸಮಿತಿಯೊಂದನ್ನು ರಚಿಸಿಕೊಂಡು ಪ್ರತಿ ತಿಂಗಳು ನಿವೃತ್ತಿ ಪಿಂಚಣಿದಾರರ ಅಥವಾ ನಿವೃತ್ತಿದಾರರ ಸಮಸ್ಯೆಗಳನ್ನು ಆಲಿಸುವ ಸಭೆ ನಡೆಸಬೇಕು. ಈ ಸಭೆಯ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತಿಯಾಗುವ ನೌಕರರ ಪಿಂಚಣಿ ಕಾಲಕ್ಕೆ ಸರಿಯಾಗಿ ಪಾವತಿಸದಿದ್ದಲ್ಲಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಂದ ಪಿಂಚಣಿದಾರರ ಜೀವಾನಾಂಶ ಪಾವತಿಸುವಂತೆ ತಿಳಿಸಲಾಗುವುದು. ಎಲ್ಲಾ ಬ್ಯಾಂಕುಗಳ ಬ್ರಾಂಚ್‌ಗಳು ಹಿರಿಯ ನಾಗರಿಕರಿಗೆ ಹೆಲ್ಪ್ ಡೆಸ್ಕ್ ಪ್ರಾರಂಭಿಸುವಂತೆ ಹಾಗೂ ಅವರ ಪಾಸ್‌ಬುಕ್‌ಗಳನ್ನು ಎಂಟ್ರಿ ಮಾಡಲು ಪ್ರಾಧಾನ್ಯತೆ ನೀಡಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ ಅವರಿಗೆ ತಿಳಿಸಿದರು.

ಜಿಲ್ಲಾ ಖಜಾನೆಯ ಉಪನಿರ್ದೇಶಕ ಹರಿನಾಥ್ ಬಾಬು ಮಾತನಾಡಿ, ಈ ಹಿಂದೆ ಹಲವಾರು ಬ್ಯಾಂಕ್‌ಗಳ ಮೂಲಕವೇ ಪಿಂಚಣಿಯನ್ನು ಪಾವತಿಸಲಾಗುತ್ತಿತ್ತು. ಹಳೇ ಪಿಂಚಣಿದಾರರು ಮುಂದಿನ ನಾಲ್ಕೂವರೆ ತಿಂಗಳಲ್ಲಿ ಸೂಚಿಸಿರುವ ಐದು ಬ್ಯಾಂಕ್‌ಗಳ ಪೈಕಿ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬೇಕು. ಪ್ರತಿ ವರ್ಷ ನವೆಂಬರ್‌ನಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು ಎಂದು ಹೇಳಿದರು.

ಅಟಲ್ ಪಿಂಚಣಿ ಯೋಜನೆ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್.ಕುಲಕರ್ಣಿ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮಲ್ಲಯ್ಯ ಪಿಂಚಣಿ ಅದಾಲತ್‌ಗೆ ಸಂಬಂಧಿಸಿದಂತೆ ಮಾತನಾಡಿದರು.

ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಮಹಮ್ಮದ್ ಹುಸೇನ್, ಜಿಲ್ಲೆಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪಿಂಚಣಿದಾರರು ಇದ್ದರು.

ಪಿಂಚಣಿ ಇಲಾಖೆಯ ವೆಂಕಟೇಶ್ ವಂದಿಸಿದರು.

Post Comments (+)