ರಾಯಚೂರು: ಮತ್ತೆ ಮೋದಿ ಪ್ರಧಾನಿಯಾಗಲು ಮತ– ರಾಜಾ ಅಮರೇಶ್ವರ ನಾಯಕ

ಭಾನುವಾರ, ಮೇ 26, 2019
31 °C

ರಾಯಚೂರು: ಮತ್ತೆ ಮೋದಿ ಪ್ರಧಾನಿಯಾಗಲು ಮತ– ರಾಜಾ ಅಮರೇಶ್ವರ ನಾಯಕ

Published:
Updated:
Prajavani

ರಾಯಚೂರು: ಜನಪರ ಕೆಲಸ ಮಾಡುತ್ತಾರೆ ಎನ್ನುವ ಹೆಗ್ಗಳಿಕೆ ಹೊಂದಿರುವ ರಾಜಾ ಅಮರೇಶ್ವರ ನಾಯಕ ಅವರು ರಾಜ ವಂಶಸ್ಥ ಕುಟುಂಬದಿಂದ ಬಂದವರು. ಲಿಂಗಸುಗೂರು ತಾಲ್ಲೂಕು ಗುರಗುಂಟಾದಲ್ಲಿ ಹಲವು ಗ್ರಾಮಗಳಿಗೆ ಒಡೆಯರಾಗಿ ಹಿಂದಿನಿಂದ ಆಳ್ವಿಕೆ ಮಾಡಿಕೊಂಡು ಬಂದಿರುವ ಮನೆತನ.

1989 ಲಿಂಗಸುಗೂರಿನಿಂದ ಹಾಗೂ 1999 ರಲ್ಲಿ ರಾಯಚೂರಿನ ಕಲ್ಮಲಾ ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡೂ ಸಲ ಸಚಿವರಾಗಿದ್ದರು. ಈಗ ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದು, ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.

* ಸಚಿವರಾಗಿದ್ದಾಗ ನೀವು ಮಾಡಿದ ಕೆಲಸಗಳೇನು?

ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಂಪೂರ ಏತ ನೀರಾವರಿ ಯೋಜನೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಕಾಮಗಾರಿಗಳಿಗೆ ಚಾಲನೆ ಕೊಡುವ ಕೆಲಸವಾಗಿದೆ. 1992–93 ರಲ್ಲಿ ಚಿನ್ನಕ್ಕೆ ಧಾರಣೆ ಇಲ್ಲದೆ ಹಟ್ಟಿ ಚಿನ್ನದ ಗಣಿ ಕಂಪೆನಿ ಸ್ಥಗಿತವಾಗಿತ್ತು. ಕಾರ್ಮಿಕರು ತುಂಬಾ ಕಷ್ಟದಲ್ಲಿದ್ದರು. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕಂಪೆನಿ ಪುನರಾರಂಭಿಸಲು ಕ್ರಮ ಕೈಗೊಂಡಿದ್ದೆ. ಕಾಲುವೆ ಕೊನೆಭಾಗಕ್ಕೆ ನೀರು ತಲುಪಿಸುವ ಕೆಲಸ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಕೆರೆಗಳನ್ನು ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ. ಕಲ್ಮಲಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಕರೆಪ್ಪ ತಾತನ ದೇವಸ್ಥಾನ ಪುನರ್‌ ನಿರ್ಮಾಣ, ದೇವಸುಗೂರು ದೇವಸ್ಥಾನ, ಪಂಚಮುಖಿ ದೇವಸ್ಥಾನ ಹಾಗೂ ಅನೇಕ ದರ್ಗಾಗಳ ನಿರ್ಮಾಣಕ್ಕೂ ಅನುದಾನ ಕೊಡಲಾಗಿತ್ತು. ವಿಶೇಷವಾಗಿ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ.

* ಕ್ಷೇತ್ರದಲ್ಲಿ ನೀವು ಗುರುತಿಸಿರುವ ಸಮಸ್ಯೆಗಳೇನು?

ರಾಯಚೂರಿನಲ್ಲಿ ಎರಡು ನದಿಗಳಿದ್ದರೂ ರೈತರು ನೀರಿಗಾಗಿ ಪರದಾಡುವ ಪರಿಸ್ಥಿತಿ ತಪ್ಪಿಸುವ ಕೆಲಸ ಆಗಬೇಕಿದೆ. ಬಲದಂಡೆ ಕಾಲುವೆಯ ಪುನಶ್ಚೇತನ ಕಾಮಗಾರಿ ₹18 ಸಾವಿರ ಕೋಟಿ ಅನುದಾನದಲ್ಲಿ ಮಾಡಬೇಕಾಗಿದೆ. ಎಡದಂಡೆ ಕಾಲುವೆ ಪುನಶ್ಚೇತನ ಮಾತ್ರ ಆಗಿದೆ. ಒಂದು ಕಣ್ಣಿಗೆ ಬಣ್ಣ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿ ಆಗಿದೆ. ಬಲದಂಡೆ ಕಾಲುವೆ ಭಾಗದ ರೈತರಿಗೂ ನೀರು ಕೊಡಬೇಕಿದೆ. ಗಿಣಿಗೇರಾ–ರಾಯಚೂರು, ಶ್ರೀಶೈಲ–ಮಂತ್ರಾಲಯ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ. ವಿಮಾನ ನಿಲ್ದಾಣ ಆಗಬೇಕಿದೆ. ಲಿಂಗಸುಗೂರು ಮಾರ್ಗದಿಂದ ಹೋಗುವ ವಾಡಿ–ಗದಗ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡರೂ ಕಾಮಗಾರಿ ಆಗಿಲ್ಲ. ಆಡಳಿತ ಪಕ್ಷದ ಸಂಸದರಾದರೆ ಹೆಚ್ಚು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಜನರು ನನ್ನನ್ನು ಗೆಲ್ಲಿಸಿ ಅವಕಾಶ ಕೊಟ್ಟರೆ ರಾಯಚೂರು, ಯಾದಗಿರಿಯಲ್ಲಿ ಒಳ್ಳೆಯ ಅಭಿವೃದ್ಧಿಯಾಗುತ್ತದೆ.

* ಆಯ್ಕೆಯಾದರೆ ಆದ್ಯತೆಯಿಂದ ಮಾಡುವ ಕೆಲಸಗಳು?

ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ ಸಂಸದರು ಕೇಂದ್ರದಿಂದ ಯಾವುದೇ ಯೋಜನೆಗಳನ್ನು ತರಲಿಲ್ಲ. ನೀರಾವರಿ ಕೆಲಸಗಳನ್ನು ಮೊದಲ ಆದ್ಯತೆಯಿಂದ ಮಾಡುತ್ತೇನೆ. ಕೇಂದ್ರದ ಏನು ಸಾಧ್ಯವೋ ಅವೆಲ್ಲ ಯೋಜನೆಗಳನ್ನು ತರುವ ಕೆಲಸ ಮಾಡುತ್ತೇನೆ. ನಾನು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ, ಅಭಿವೃದ್ಧಿಗಾಗಿ ರಾಜಕೀಯ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾತ್ರ ಜನರು ನೋಡುತ್ತಾರೆ.

* ಮೋದಿ ಪರ ಅಲೆ ಕ್ಷೇತ್ರದಲ್ಲಿ ಇದೆಯೇ?

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಪ್ರಚಾರ ಮಾಡುವಾಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅನುಭವ ಮಾತ್ರ ಜನರಿಗೆ ಕಾಣುತ್ತಿತ್ತು. ಈ ಚುನಾವಣೆಯಲ್ಲಿ ಐದು ವರ್ಷ ಪ್ರಧಾನಿಯಾಗಿ ಮಾಡಿದ ಕೆಲಸಗಳು ಕಾಣಿಸುತ್ತಿವೆ. ಹಿಂದಿನ ಚುನಾವಣೆಗಿಂತಲೂ ಮೋದಿಪರ ಅಲೆಗಳು ನೂರು ಪಟ್ಟು ಹೆಚ್ಚಾಗಿದೆ.

* ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯಿಂದ ಪರಿಣಾಮ?

ಮೇಲ್ಮಟ್ಟದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಒಂದಾಗಿದ್ದಾರೆ. ಆದರೆ ತಳಮಟ್ಟದಲ್ಲಿ ಕಾರ್ಯಕರ್ತರು ಸಲೀಸಾಗಿ ಒಂದಾಗುವುದಿಲ್ಲ. ಕಾರ್ಯಕರ್ತರು ಅನುಕೂಲಸಿಂಧು ರಾಜಕಾರಣ ಒಪ್ಪುವುದಿಲ್ಲ. ಮೊದಲಿನಿಂದ ಕಾಂಗ್ರೆಸ್‌ ವಿರೋಧ ಮಾಡಿಕೊಂಡು ಬಂದಿರುವ ಜೆಡಿಎಸ್‌ನಿಂದಾಗಿ ಅಭ್ಯರ್ಥಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಜೆಡಿಎಸ್‌ ಕಾರ್ಯಕರ್ತರಿಗೆ ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ವಿಶ್ವಾಸವಿಲ್ಲ.

* ಬಿಜೆಪಿಯಲ್ಲಿ ನಿಮ್ಮ ಬಗ್ಗೆ ಅಸಮಾಧಾನ ಇದೆಯೇ?

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ವಾತಾವರಣ ಇದ್ದಾಗ, ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿದ್ದು ಸಹಜ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ನಡೆಯಬೇಕಾಗುತ್ತದೆ. ಉಳಿದ ಆಕಾಂಕ್ಷಿಗಳಿಗಿಂತ ನಾನು ಹಿರಿಯನಾಗಿದ್ದರಿಂದ ಪಕ್ಷವು ಇದನ್ನು ಪರಿಗಣಿಸಿ ಟಿಕೆಟ್‌ ನೀಡಿದೆ. ಪಕ್ಷದ ಎಲ್ಲ ಮುಖಂಡರೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ಸಹಕಾರ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ.

* ರಾಷ್ಟ್ರಮಟ್ಟದ ವಿಷಯಾಧರಿಸಿ ಜನರು ಮತ ಕೊಡುತ್ತಾರಾ?

ದೇಶ ಕಂಡ ಧೀಮಂತ ಪ್ರಧಾನಿ ನರೇಂದ್ರ ಮೋದಿ. ಅವರಿಗೆ ಸರಿಸಮನಾಗಿ ನಿಲ್ಲುವ ಧೀಮಂತ ನಾಯಕರಾರೂ ದೇಶದಲ್ಲಿ ಸದ್ಯಕ್ಕಿಲ್ಲ. ಮೋದಿ ಅವರ ದೂರದೃಷ್ಟಿ ಹಾಗೂ ನಿರ್ಧಾರಗಳನ್ನು ನೋಡಿ, ಇನ್ನೊಂದು ಅವಧಿ ಅವರು ಪ್ರಧಾನಿಯಾದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎನ್ನುವ ಮನೋಭಾವ ಜನರಲ್ಲಿ ವ್ಯಾಪಕವಾಗಿದೆ. ಬಲಿಷ್ಠ ರಾಷ್ಟ್ರ ಕಟ್ಟಬೇಕೆನ್ನುವ ಆಕಾಂಕ್ಷೆ ಪ್ರತಿಯೊಬ್ಬರಲ್ಲೂ ಇದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಮಾಜಿ ಶಾಸಕ ಡಾ. ಮಲಕರೆಡ್ಡಿ ಅವರು ಪ್ರಧಾನಿಯನ್ನು ನೋಡಿ ಬಿಜೆಪಿ ಸೇರಿದ್ದಾರೆ. ಅವರಂತೆಯೇ ನಾನೂ ಬಿಜೆಪಿ ಸೇರಿದ್ದೇನೆ.

* ಕಾಂಗ್ರೆಸ್‌ಗೆ ರಾಯಚೂರು ಭದ್ರಕೋಟೆ ಆಗಿದೆಯಲ್ಲ?

ಹೌದು ಭದ್ರಕೋಟೆಯಾಗಿತ್ತು. ಅದರಲ್ಲಿ ನಾವೂ ಇದ್ದೆವು. ಕಳೆದ ಚುನಾವಣೆಯಲ್ಲಿ ಲಿಂಗಸುಗೂರು ಮತಕ್ಷೇತ್ರದಲ್ಲಿ ಕೆಲಸ ಮಾಡಿ ಸುಮಾರು ಆರು ಸಾವಿರ ಹೆಚ್ಚು ಮತಗಳನ್ನು ಕೊಟ್ಟಿದ್ದೆ. ಕಾಂಗ್ರೆಸ್‌ ಸಂಸದರು ಐದು ವರ್ಷ ಯಾವುದೇ ಕೆಲಸ ಮಾಡಿಲ್ಲ. ಕಾಂಗ್ರೆಸ್‌ನಿಂದ ನಾವೆಲ್ಲ ಹೊರಗೆ ಬಂದ ಮೇಲೆ ಅದು ಭದ್ರಕೋಟೆಯಾಗಿ ಉಳಿದಿಲ್ಲ. ಇಂದಿರಾಗಾಂಧಿ, ರಾಜೀವ್‌ ಗಾಂಧಿ ಅವರ ಕಾಲದಲ್ಲಿದ್ದ ಕಾಂಗ್ರೆಸ್‌ ಕೋಟೆ ಈಗ ಉಳಿದುಕೊಂಡಿಲ್ಲ.

* ಚುನಾವಣೆಯಲ್ಲಿ ಎದುರಾಗಿರುವ ಸವಾಲುಗಳೇನು?

ಈ ಚುನಾವಣೆಯಲ್ಲಿ ದೇಶಕ್ಕೆ ಸಂಬಂಧಿಸಿದ ವಿಷಯಗಳು ಪ್ರಮುಖ. ಹೊಸ ಮತದಾರರು ಮೋದಿ ಅವರ ಪರವಾಗಿದ್ದಾರೆ. ರಾಯಚೂರಿನಲ್ಲಿ ಐದು ವರ್ಷ ಕಾಂಗ್ರೆಸ್‌ ಅಭ್ಯರ್ಥಿಗೆ ಅವಕಾಶ ಕೊಟ್ಟು ನೋಡಿದ್ದಾರೆ. ಈಗ ಜನರು ಬದಲಾವಣೆ ಬಯಸುತ್ತಿದ್ದು, ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವ ಆಕಾಂಕ್ಷೆ ಜನರಲ್ಲಿದೆ. ನನಗೆ ರಾಜಕೀಯ ಅನುಭವ ಇದೆ. ಸಚಿವನಾಗಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸಗಳು ಜನರಿಗೆ ಗೊತ್ತು. ಹೀಗಾಗಿ ಚುನಾವಣೆಯಲ್ಲಿ ಯಾವುದೇ ಕಠಿಣವಾದ ಸವಾಲು ನಮ್ಮ ಮುಂದೆ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !