ಗುರುವಾರ , ಅಕ್ಟೋಬರ್ 17, 2019
22 °C
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಸಲಹೆ

ಅಭಿವೃದ್ಧಿ ಸಾಧಿಸಲು ಜನಪ್ರತಿನಿಧಿಗಳು ಬದ್ಧರಾಗಿ

Published:
Updated:
Prajavani

ರಾಯಚೂರು: ‘ಅಭಿವೃದ್ಧಿ ಸಾಧಿಸಲು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಮಹತ್ವಾಕಾಂಕ್ಷಿಗಳಾಗಿವೆ. ಕೇಂದ್ರ ಸರ್ಕಾರದಿಂದ ಅಗತ್ಯವಾಗುವ ನೆರವು ಒದಗಿಸಲು ಸೇತುವೆಯಂತೆ ಕೆಲಸ ಮಾಡುತ್ತೇನೆ. ಆದರೆ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಅಭಿವೃದ್ಧಿಗೆ ಬದ್ಧರಾಗಿ ಬರಬೇಕು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಸಲಹೆ ನೀಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನೀತಿ ಆಯೋಗ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್‌ಡಿಪಿ) ಸಹಯೋಗದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ‘ಮಹತ್ವಾಕಾಂಕ್ಷಿ ಜಿಲ್ಲೆಗಳು ಯಾದಗಿರಿ ಮತ್ತು ರಾಯಚೂರಿಗಳಲ್ಲಿ ಸುಸ್ಥಿರ ಅಭಿವೃದ್ಧಿ ಧ್ಯೇಯಗಳ ಕುರಿತು ತಾಂತ್ರಿಕ ಸಹಕಾರ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.

’ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದು ಒಳ್ಳೆಯ ಬೆಳವಣಿಗೆ. ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡದಂತೆ ಎರಡೂ ಜಿಲ್ಲೆಗಳ ಶಾಸಕರು ರಾಜ್ಯ ಸರ್ಕಾರದ ಮಟ್ಟದಲ್ಲಿ ನೋಡಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಕೃಷಿ, ಮೂಲ ಸೌಕರ್ಯ, ಕೌಶಲ ಅಭಿವೃದ್ಧಿ ಹಾಗೂ ಕುಡಿಯುವ ನೀರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೀತಿ ಆಯೋಗವು ಪ್ರತಿ ತಿಂಗಳು ಸೂಚಿಗಳನ್ನು ಪರಿಶೀಲಿಸುತ್ತದೆ. ಈ ಭಾಗದಲ್ಲಿ ಏನು ಅಭಿವೃದ್ಧಿ ಮಾಡಬೇಕಿದೆ. ಕೇಂದ್ರ ಸರ್ಕಾರದಿಂದ ಏನೇನು ನೆರವು ಬೇಕಾಗುತ್ತದೆ ಎಂಬುದನ್ನು ಪಟ್ಟಿ ನೀಡಲಾಗಿದೆ. ಆದರೆ, ಮೇಲಿಂದ ಮೇಲೆ ಈ ಬಗ್ಗೆ ನೆನಪಿಸಿ ಕೆಲಸ ತೆಗೆದುಕೊಳ್ಳುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾಳಜಿ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಹೂಡಿಕೆ ಮಾಡುವುದಕ್ಕೆ ಉದ್ಯಮಿಗಳ ಸಭೆ ನಡೆಸಲಾಗುವುದು. ಬಲ್ಕ್‌ ಡ್ರಗ್ಸ್‌ ಇನ್ವೆಸ್ಟರ್ಸ್‌ ಸಭೆ ಮಾಡಲಾಗುವುದು. ಖಾಸಗಿ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗಾಕಾಶ ಕಲ್ಪಿಸಬೇಕು. ಇದಕ್ಕಾಗಿ ಕೌಶಲ ತರಬೇತಿ ನೀಡುವುದಕ್ಕೆ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ನಂಜುಂಡಪ್ಪ ವರದಿ ಆಧರಿಸಿ ಈ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಹರಿದು ಬರುತ್ತಿದ್ದರೂ ಬದಲಾವಣೆ ಕಾಣುವುದಕ್ಕೆ ಸಾಧ್ಯವಾಗುತ್ತಿಲ್ಲ. ಜನರು, ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಪ್ರಮುಖರು ಒಟ್ಟಾಗಿ ಅಭಿವೃದ್ಧಿಯ ಆಕಾಂಕ್ಷೆಗಳೇನು ಎಂಬುದನ್ನು ಕ್ರೋಢೀಕರಿಸಲಾಗುವುದು ಎಂದು ಹೇಳಿದರು.

ಸಂಸದರಾದ ಡಾ.ಉಮೇಶ ಜಾಧವ, ಕರಡಿ ಸಂಗಣ್ಣ ಹಾಗೂ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ್‌ ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ, ಶಾಸಕರಾದ ಬಸನಗೌಡ ದದ್ದಲ, ವೆಂಕಟರಾವ್‌ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಇದ್ದರು.

Post Comments (+)